ಶೈಖಾನಾ ಬೇಕಲ ಉಸ್ತಾದ್ | ಇಲ್ಮೀ ಕ್ಷೇತ್ರದ ಶ್ರೀಮಂತಿಕೆಯನ್ನು ವೃದ್ಧಿಸಿದ ಪಂಡಿತ

bekla usthad
Share on facebook
Share on twitter
Share on linkedin
Share on whatsapp
Share on telegram
Share on email
Share on print

1980 ರ ದಶಕದ ಪ್ರಥಮ ಭಾಗದಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪ್ರತಿಷ್ಠಿತ ಮೊಹಲ್ಲಾದ ಉದ್ಯಾವರ ಸಾವಿರ ಜಮಾಅತಿನ ಕೇಂದ್ರ ಜುಮಾ ಮಸ್ಜಿದ್ನಲ್ಲಿ ನಾನು ದರ್ಸ್ ಕಲಿಯುತ್ತಿರುವ ಹೊತ್ತಿನಲ್ಲಿ ಬೇಕಲ ಉಸ್ತಾದರು ಪ್ರತಿಷ್ಠಿತ ಕಾಸರಗೋಡ್ನ ಬೇಕಲ ದರ್ಸಿನ ಮದರ್ರಿಸ್ ಆಗಿ ಸೇವೆಯಲ್ಲಿದ್ದರು. ಈ ಸಮಯದಲ್ಲಿ ಕೆಲವೊಮ್ಮೆ ನನ್ನ ಗುರುವರ್ಯರಾದ ಶೈಖುನಾ ಪುಂಜಾಲಕಟ್ಟೆ ಉಸ್ತಾದರನ್ನು ಶೈಖುನಾ ಬೇಕಲ ಉಸ್ತಾದರು ಭೇಟಿಯಾಗುತ್ತಿದ್ದರು

. ನನ್ನ ಗುರುವರ್ಯರು ತನ್ನ ಕ್ಲಾಸಿನ (ಸಬಖ್)  ವಿಷಯದಲ್ಲಿ ಅತ್ಯಂತ ನಿಷ್ಠೂರರಾಗಿದ್ದರೂ ಬೇಕಲ ಉಸ್ತಾದ್ ಹಾಗೂ ಮಚ್ಚಂಪಾಡಿ ಉಸ್ತಾದ್ (ಮಾಣಿ ಹಮೀದ್ ಮುಸ್ಲಿಯಾರ್) ಅಲ್ಲಿಗೆ ಬಂದರೆ ಆ ನಿಷ್ಠೂರತೆಗೆ ಕೊಂಚ ಸಡಿಲಿಕೆ ಇರುತ್ತಿತ್ತು. ಇವರಲ್ಲಿ  ಬೇಕಲ ಉಸ್ತಾದ್ ಬೆಳಿಗ್ಗೆ ಬಂದರೆ ಮಧ್ಯಾಹ್ನದವರೆಗೆ ಹಾಗೂ ಮಧ್ಯಾಹ್ನದ ಹೊತ್ತಿಗೆ ಬಂದರೆ ಸಂಜೆಯವರೆಗೆ ನಮಗೆ ಕ್ಲಾಸ್ ಇರುತ್ತಿರಲಿಲ್ಲ. ಆಗಿನ ಹೊತ್ತಿನಲ್ಲಿ ಕ್ಲಾಸಿನ ವಿಷಯದಲ್ಲಿ ಕೊಂಚವೂ ವಿರಾಮ ನೀಡದ ನಮ್ಮ ಉಸ್ತಾದರ ನಿಲುವಿಗೆ ಕೊಂಚವಾದರೂ ಬದಲಾವಣೆ ಸಿಗಬೇಕಾದರೆ ಇವರಲ್ಲಿ ಯಾರಾದರೂ ಬರಲೇಬೇಕು.

ಅದರಲ್ಲೂ ಬೇಕಲ ಉಸ್ತಾದರ ಆಗಮನವಂತೂ ವಿದ್ಯಾರ್ಥಿಗಳಾದ ನಮ್ಮ ಮನಸ್ಸಿಗೆ ಖುಷಿ ತರುತ್ತಿದ್ದುದು ಅಲ್ಲಗಳೆಯಲಾಗದ ವಾಸ್ತವ ಸಂಗತಿಯಾಗಿತ್ತು. ನಹ್ವಿನ ತುಹ್ಫದಿಂದ ಹಿಡಿದು ಫಿಕ್ಹಿನ ತುಹ್ಫದ ಮುಖದ್ದಿಮದವರೆಗಿರುವ ಎಲ್ಲ ಗ್ರಂಥಗಳನ್ನು (ಇದರಲ್ಲಿ ಮೀರ್, ಖಯಾಲಿ ಕ್ರಮವಾಗಿ ಖುತುಬಿ ಹಾಗೂ ಶರಹುಲ್ ಅಖಾಯಿದದೊಂದಿಗೆ ಓದಿದ ಕಿತಾಬಿನ ಹೊರತಾಗಿ ದರ್ಸ್ನಲ್ಲಿ  ಅಪರೂಪವಾಗಿ ಓದುವ ಇಲ್ಮುಲ್ ಅರೂಳದ ಗಂಥವೂ ಸೇರಿವೆ) ಓದಲು ಅವಕಾಶ ದೊರತ ಸತತ 9 ವರ್ಷದ ನನ್ನ ಸುದೀರ್ಘ ದರ್ಸ್ ಅಧ್ಯಯನದ ಕಾಲದಲ್ಲಿ ನನ್ನ ಉಸ್ತಾದರ ಭೇಟಿಗಾಗಿ  ಬೇಕಲ ಉಸ್ತಾದರ ಆಗಮನವೂ ಸತತವಾಗಿ ಮುಂದುವರಿಯುತ್ತಲೇ ಇತ್ತು. ಈ ತೆರನ ಬೇಕಲ ಉಸ್ತಾದರು ಅಲ್ಲಿಗೆ ಬಂದರೆ ನಮ್ಮ ಉಸ್ತಾದರೊಂದಿಗೆ ದೀರ್ಘವಾದ ಇಲ್ಮೀ ಚರ್ಚೆಯಲ್ಲಿ  ಮಗ್ನರಾಗುತ್ತಿದ್ದರು.  ಕೆಲವೊಮ್ಮೆ ಕೊಠಡಿಯ ಬಾಗಿಲು ಹಾಕಿಯೂ ಈ ಚರ್ಚೆಗಳು ಮುಂದುವರಿಯುತ್ತಿತ್ತು. ಇವರ ಈ ಸ್ನೇಹದ ಭೇಟಿಗೆ ನಮ್ಮ ಉಸ್ತಾದರನ್ನೇ ಆಯ್ಕೆ ಮಾಡಿದುದರ ನೈಜ ಉದ್ದೇಶ ಏನಾಗಿರಬಹುದೆಂಬ ಜಿಜ್ಞಾಸೆ ಆ ಕಾಲದಲ್ಲಿ ವಿದ್ಯಾರ್ಥಿಗಳಾದ ನಮಗೆ ಉಂಟಾದುದು ಸುಳ್ಳಲ್ಲ.  ಕೆಲವು ವಿದ್ಯಾರ್ಥಿಗಳ ಪ್ರಕಾರ ಉಳ್ಳಾಲದಲ್ಲಿ ಕಾಲೇಜ್ ಸ್ಥಾಪಿತವಾಗುವ ಮೊದಲು ಬಹು: ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಕುಂಞಕೋಯ ಅಲ್ಬುಖಾರಿ ತಂಙಳ್ರವರ ಉಳ್ಳಾಲ ಮಸ್ಜಿದ್ನಲ್ಲಿ ನಡೆಯುತ್ತಿದ್ದ ದರ್ಸ್ನಲ್ಲಿ ಇವರೀರ್ವರೂ ಸಹಪಾಠಿಗಳಾಗಿದ್ದುದು ಕಾರಣವಾಗಿರಬಹುದು ಎಂದಾದರೆ ಇನ್ನಿತರರು ಬೇರೆಯೇ ಕಾರಣಗಳನ್ನು ಹೇಳುತ್ತಿದ್ದರು. ಇಲ್ಲಿ ಬೇಕಲ ಉಸ್ತಾದರ ಭೇಟಿಯ ಹೊರತಾಗಿಯೂ ಆ ಹೊತ್ತಿನಲ್ಲಿ ನಾನು ಬೇಕಲ ಉಸ್ತಾದರಲ್ಲಿ ನೇರವಾಗಿ ಮಾತಾನಾಡಿರಲಿಲ್ಲ.

ಮೊದಲೆನೆಯದಾಗಿ ನಮ್ಮ ಉಸ್ತಾದರ ಸಹಪಾಠಿಯೆಂಬುದು ವಿದ್ಯಾರ್ಥಿಯಾದ ನನ್ನ ಹೃದಯಲ್ಲಿ ಒಂದು ರೀತಿಯ ಭಯವಿದ್ದುದು ಕಾರಣವಾಗಿತ್ತು.  ಆದರೆ,1990 ರಲ್ಲಿ ನನಗೆ ಬೇಕಲ ಉಸ್ತಾದರ 2 ದಿನದ ನಿರಂತರ ಸೇವೆಗೆ ಅವಕಾಶ ದೊರೆಯಿತು. ವಿಟ್ಲದ ಸಮೀಪದ ಬೈರಿಕಟ್ಟೆ ಜುಮಾ ಮಸೀದಿಯಲ್ಲಿ 3 ತಿಂಗಳ ಕಾಲ ಖತೀಬ್ ಆಗಿಯೂ ಅಲ್ಲಿ ದರ್ಸ್ನಲ್ಲಿ ಕಲಿಯುತ್ತಿದ ಮುತಅಲ್ಲಿಮರಿಗೆ ಕಿತಾಬ್ ಹೇಳಿಕೊಡುವ ಒಂದು ಅವಕಾಶ ನನ್ನ ಕಲಿಕಾ ಕಾಲದಲ್ಲೇ ನನ್ನ ಉಸ್ತಾದರ ಒಪ್ಪಿಗೆಯೊಂದಿಗೆ ನನಗೆ ಒದಗಿ ಬಂದಿತ್ತು. ಅಲ್ಲಿ ಮುದರ್ರಿಸ್ ಆಗಿ ಸೇವೆಯಲ್ಲಿದ್ದ ನನ್ನ ಬಾವನವರು ತನ್ನ ಮನೆಯ ಕೆಲಸದ ನಿಮಿತ್ತ 3 ತಿಂಗಳ ರಜೆಯಲ್ಲಿ ಹೋದಾಗ ನನ್ನನ್ನು ಬದಲಿಗೆ ಅಲ್ಲಿ ನಿಲ್ಲಿಸಿ ಅವರು ರಜೆಯಲ್ಲಿ ಹೋಗಿದ್ದರು. ಆ ಹೊತ್ತಿನಲ್ಲಿ ಅಲ್ಲಿ ವರ್ಷಂಪ್ರತೀ ನಡೆಯುವ ವಾರ್ಷಿಕ 10 ದಿನಗಳ ಮತ ಪ್ರವಚನದಲ್ಲಿ 2 ದಿನದ ಪ್ರಭಾಷಣ ಬಹು: ಬೇಕಲ ಉಸ್ತಾದರದ್ದಾಗಿತ್ತು. ಈ ಎರಡು ದಿನವೂ ಬೇಕಲ ಉಸ್ತಾದ್ರು ಅಲ್ಲಿನ ಖತೀಬರ ಸಾಮಾನ್ಯ ಕೊಠಡಿಯಲ್ಲಿಯೇ ಇರುತ್ತಿದ್ದರು. ಈ ಎರಡು ದಿನವೂ ನನ್ನಿಂದಾದ ಸೇವೆ ಮಾಡಲು ಸಾಧ್ಯವಾದರೂ ಬೇಕಲ ಉಸ್ತಾದ್ ಸೇವೆ ಮಾಡದಂತೆ ಮೇಲಿಂದ ಮೇಲೆ ನನ್ನನ್ನು ತಡೆಯುತ್ತಿದ್ದರು. ಅಲ್ಲಿನ 2 ದಿನದ ಉಸ್ತಾದರ ತಂಗುವಿಕೆಯಲ್ಲಿ ಹಲವಾರು ವಿಷಯಗಳ ಕುರಿತು ವಿದ್ಯಾರ್ಥಿಯಾಗಿದ್ದ ನನ್ನೊಡನೆ ತನ್ನ ಗೆಳೆಯನಂತೆ ಮಾತಾನಾಡುತ್ತಿದ್ದರು. ನಾನು ಗರಿಷ್ಠ ಶಿಷ್ಚಾರದೊಂದಿಗೆ ಉಸ್ತಾದರೊಂದಿಗೆ ವರ್ತಿಸಿದರೂ ಗೆಳೆಯನಂತೆ ನನ್ನಲ್ಲಿ ಆನ್ಯೋನ್ಯವಾಗಿ ಹಲವಾರು ವಿಷಯಗಳನ್ನು ಹೇಳುತ್ತಿದ್ದರು. ಇದು ಆ ವಿದ್ವತ್ ವ್ಯಕ್ತಿತ್ವದಲ್ಲಿ ಅಹಂ ಇಲ್ಲದಿದ್ದುದರ ಸಂಕೇತವೆನ್ನದೆ ವಿಧಿಯಿಲ್ಲ. ನನ್ನಲ್ಲಿ ಮಾತನಾಡುತ್ತಾ ಮುಂದುವರಿದ ಬೇಕಲ ಉಸ್ತಾದರು ಬಾರಿ ಬಾರಿಗೂ ಹೇಳುತ್ತಿದ್ದುದು  ಕಿತಾಬಿನ ಪಾರಾಯಾಣವನ್ನೇ ಆಗಿತ್ತು. ಪರಾಯಣದ ಮಧ್ಯೆ  ಸಂಶಯ ಎದುರಾದರೆ ಅಲ್ಲಿಗೆ ನಿಲ್ಲಿಸದೆ ಅಲ್ಲಿರುವ ಸಂಶಯವನ್ನು ನಿವಾರಿಸಿ ಪಾರಾಯಣ ಮುಂದುವರಿಸಬೇಕು. ಈ ರೀತಿಯಲ್ಲೇ ಪಾರಾಯಣವನ್ನು ಮುಂದುವರಿಸಿದರೆ ವಿಷಯದಲ್ಲಿ ಡೃಢೀಕರಣ ಲಭ್ಯವಾಗುತ್ತದೆಯೆಂಬ ಅವರ ಸ್ವತಃ ಈ ಅನುಭವವೂ ವಿದ್ವಾಂಸ ಸಮೂಹಕ್ಕೆ ಕಿತಾಬಿನ ಪಾರಾಯಣಕ್ಕೆ ಮೇಲ್ಪಂಕ್ತಿಯನ್ನೇ ಹಾಕಿ ಕೊಟ್ಟಿದೆ. ಕಾಸರಗೋಡಿನ ಸಮೀಪದ ಮೇಲ್ಪರಂಬದ ಮಾಜಿ ಖತೀಬರು ಸಮಸ್ತ ಕಾಸರಗೋಡು ಜಿಲ್ಲಾ ಮುಶಾವರದ ಹಿರಿಯ ಸದಸ್ಯರೂ ಆದ ವಿದ್ವತ್ತು ವ್ಯಕ್ತಿತ್ವದ ದಿವಂಗತ ಮಹಾಚೇತನ ಗೌರವಾನ್ವಿತ ಅಬ್ದುಲ್ ಖಾದರ್ ಮುಸ್ಲಿಯಾರ್ವರ ಪಾರಾಯಣ ರೀತಿಯ ಕುರಿತು ನನಗೆ ಬೇಕಲ ಉಸ್ತಾದ್ ಹೇಳಿಕೊಡುತ್ತಿದ್ದರು. ಇಂತಹ ಒಬ್ಬ ವಿದ್ವತ್ತು ತುಂಬಿದ ವಿದ್ವಾಂಸರೊಬ್ಬರ ಉಪಸ್ಥಿತಿಯ ಕುರಿತು ನನ್ನ ಗಮನಕ್ಕೆ ಬಂದದ್ದೇ ಬೇಕಲ ಉಸ್ತಾದರಿಂದವಾಗಿತ್ತು.

ಇವರ ಗ್ರಂಥಗಳ ಪಾರಾಯಣ ಶೈಲಿಯನ್ನು ಯುಕ್ತ ರೀತಿಯಲ್ಲಿ ಅನುಸರಿಸಿದರೆ ವಿಷಯಗಳ ಹಿಡಿತ ಸಲೀಸಾಗಿ ಮನದಟ್ಟಾಗುವುದು ಖಚಿತವೆಂಬುದನ್ನು ಹೇಳಿದರಲ್ಲದೆ ಅದನ್ನು ಅನುಕರಣೆ ಮಾಡಬೇಕೆಂದು ಬೇಕಲ ಉಸ್ತಾದರು ನನ್ನನ್ನು ಪ್ರೇರೇಪಿಸಿದ್ದನ್ನು ಸ್ಮರಿಸುವಾಗ ಅವರಿಗಿದ್ದ ಈ ತೆರನ ಅನುಭವಗಳು ಮನ ಮುಟ್ಟವಂತಿತ್ತು. ಮೇಲ್ಪರಂಬ್ ಉಸ್ತಾದರು ಯಾವ ವಿಷಯಗಳ ಗ್ರಂಥವನ್ನೇ ಪಾರಾಯಣಕ್ಕಾಗಿ ಆಯ್ಕೆ ಮಾಡಲಿ ಆ ವಿಷಯಕ್ಕೆ ಸಂಬಂಧಪಡದ ಪ್ರಸ್ತಾಪ ಅದರಲ್ಲಿದ್ದರೆ ಆ ಪ್ರಸ್ತಾಪವಿರುವ ವಿಷಯಗಳ ಗ್ರಂಥದ ಪುಟ ಸಹಿತ ಪಾರಾಯಣ ಮಾಡುತ್ತಿರುವ ಗ್ರಂಥದಲ್ಲಿ ಟಿಪ್ಪಣಿ ರೀತಿಯಲ್ಲಿ ಬರೆಯುವ ರಿವಾಜು ಅವರದ್ದಾಗಿತ್ತೆಂದು ಬೇಕಲ ಉಸ್ತಾದರು ಹೇಳಿದ್ದರಲ್ಲದೆ ವಿದ್ವಾಂಸರಲ್ಲಿ ಯಾರಾದರೂ ಒಂದೆರೆಡು ದಿನಗಳಲ್ಲಿ ಪಾರಾಯಣ ಮಾಡಿ  ಮರಳಿಸುವ ಉಪಾಧಿಯೊಂದಿಗೆ ಅವರಲ್ಲಿರುವ ಗ್ರಂಥವನ್ನು ಪಾರಾಯಣಕ್ಕಾಗಿ ಕೇಳಿದರೆ ನನಗೆ ( ಬೇಕಲ ಉಸ್ತಾದರಿಗೆ) ಕೊಡುವಷ್ಟು ಸಲೀಸಾಗಿ ಇತರರಿಗೆ ಕೊಡುತ್ತಿರಲಿಲ್ಲವೆಂದು ಬೇಕಲ ಉಸ್ತಾದ್ ಹೇಳುತ್ತಿದ್ದುದು ನಾನು ಜ್ಞಾಪಿಸ ಬಯಸುತ್ತೇನೆ. ಈ ಬಳಿಕ ನಾನು ನಂದಿ ದಾರುಸ್ಸಲಾಮಿನಿಂದ ಪದವೀಧರನಾಗಿ ಕಾಸರಗೋಡ್ನ ತಾಯಲಂಗಾಡಿಯಲ್ಲಿ ಸೇವೆಯಲ್ಲಿರುವ ವೇಳೆಯಲ್ಲೊಮ್ಮೆ ನಾನು ಕಾಸರಗೋಡಿಗೆ ಹೋಗಲು ನಗರದ ಪಂಪುವೆಲ್ ವೃತ್ತ ಬಳಿ ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ಹತ್ತಿದೆ. ಅದೇ ಬಸ್ಸಿಗೆ ನಗರದ ಹೊರವಲಯದಲ್ಲಿರುವ  ತೊಕ್ಕೂಟು ಬಳಿ ಬೇಕಲ ಉಸ್ತಾದರು ಹತ್ತಿದರು. ಕಿಕ್ಕಿರಿದ ಜನಜಂಗುಳಿಯಿಂದಾಗಿ ಬಸ್ಸಿನಲ್ಲಿ ಕುಳಿತುಕ್ಕೊಳ್ಳಲು ನಮ್ಮಿಬ್ಬರಿಗೂ ಸೀಟು ಸಿಕ್ಕಿರಲಿಲ್ಲ. ಪಟ್ಟೋರಿ ದಿವಂಗತ ಉಮ್ಮರ್ ಹಾಜಿಯವರು ಮರಣ ಹೊಂದಿದ ದಿನವಾದ್ದರಿಂದ ಮಯ್ಯತ್ ನೋಡಲೆಂದು ಬೇಕಲದಿಂದ ಬಂದ ಬೇಕಲ ಉಸ್ತಾದ್ ತಿರುಗಿ ಬೇಕಲಕ್ಕೆ ಹೋಗುವ ವೇಳೆಯಲ್ಲಾಗಿತ್ತು ನಮ್ಮಿಬ್ಬರ ಈ ಒಂದೇ ಬಸ್ಸಿನಲ್ಲಿರುವ ಕಾಸರಗೋಡಿಗಿರುವ ಯಾತ್ರೆ. ಈ ಯಾತ್ರೆಯ ಮಧ್ಯೆ ಉಸ್ತಾದರು ನನ್ನ ಪರಿಚಯ ಕೇಳಿದರು. ಆರೇಳು ವರ್ಷದ ಬಳಿಕವಾದ್ದರಿಂದ ಬೈರಿಕಟ್ಟೆಯಲ್ಲಿ ಕಂಡ ಪರಿಚಯ ಉಸ್ತಾದರಿಗೆ ಮರೆತು ಹೋಗಿರಬಹುದು. ಈತನ್ಮಧ್ಯೆ ತುಂಬಾ ದನ್ಯತಾಭಾವದೊಂದಿಗೆ ಒಂದು ಮಸ್ಅಲಃ ಕೇಳಬಹುದಾ ಎಂದು ನಾನು ಉಸ್ತಾದರಲ್ಲಿ ಕೇಳಿದಾಗ ಉಸ್ತಾದರು ನಗುಮುಖದಲ್ಲಿಯೇ ಅದಕ್ಕೇನಿದೆ‘? ಎಂದು ಹೇಳಿದಾಗ ನಾನು ಉಸ್ತಾದರಲ್ಲಿ  ಕೆಲವು ಸ್ಥಳಗಳಲ್ಲಿ ಶುಕ್ರವಾರ ಜುಮಅಃ ಖುತುಬಾಕ್ಕೆ ಮುಂಚಿತವಾಗಿ ಭಾಷಣ ಮಾಡುತ್ತಿರುವುದರ ಕರ್ಮಶಾಸ್ತ್ರ ವಿಧಿಯೇನು? ಎಂದು ಕೇಳಿದಾಗ ಅದು ಕರಾಹತ್ಎಂದು ಉಸ್ತಾದರು ಹೇಳಿದಾಗ ಕೇರಳದ ಉಲಮಾರೆಡೆಯಲ್ಲಿ ವಿಭಿನ್ನ ವಿಧಿ (ಹುಕುಂ) ಗಳು ಇರುವುದರ ಜೊತೆಗೆ ಶಾರಿಹ್ನ ಭಾಗದಿಂದ ಇದಕ್ಕೆ ವಿರುದ್ದವಾಗಿ ಯಾವುದೇ ಉಲ್ಲೇಖ ನಮೂದಿತವಾಗಿಲ್ಲದ ಕಾರಣ ಇದಕ್ಕೊಂದು ವಿಧಿ ಕರಾಹತ್ ಹೋಗಿ ಖಿಲಾಪುಲ್ ಔಲಃವೆಂದೂ ವಿಧಿ ಹೇಳಲಾಗದೆಂದೂ ಅದೇ ವೇಳೆ ಪ್ರಾಚೀನ ಹಾಗೂ ಆರ್ವಾಚೀನ ಕಾಲದಿಂದ ನಡೆದು ಬಂದ ರೀತಿ ಆ ಖತುಬಾಃಕ್ಕೆ ಮುಂಚಿತವಾಗಿ ಆ ಮೌಲ್ಯಾಧಾರಿತ ಹೊತ್ತಿನಲ್ಲಿ ಅಲ್ಕಹ್ಫ್, ಸ್ವಲಾತ್, ದುವಾ ಇವೇ ಮೊದಲಾದ ಸತ್ಕರ್ಮಗಳು ಮಾಡಬೇಕಾದ ಸಂದರ್ಭದಲ್ಲಿ ನೂತನವಾದೊಂದು ರಿವಾಜು ಸೃಷ್ಟಿಸುವುದು ಸಮಂಜಸಲ್ಲವೆಂದೂ ಆದರೆ ಇದನ್ನೇ ಕಾರಣವಾಗಿಸಿ ಇದಕ್ಕೊಂದು ವಿಧಿ ಹೇಳಲಾಗದೆಂದು ಪ್ರತಿಷ್ಠಿತ ಉಲಮಾ ಸಮೂಹದಲ್ಲಿ ಹೇಳುವವರಿದ್ದಾರಲ್ಲ ಎಂದು ನಾನು ಬೇಕಲ ಉಸ್ತಾದರಲ್ಲಿ ಹೇಳಿದಾಗ ಉಸ್ತಾದರು ಒಮ್ಮಿದೊಮ್ಮೆಲೆ ಕೋಪಗೊಂಡು ಬಸ್ಸಿನಲ್ಲಿದ್ದ ಕಿಕ್ಕಿರಿದ ಜನಜಂಗುಳಿಯ ಮಧ್ಯೆ ನನ್ನನ್ನು ಅವರ ಬಲಗೈಯಿಂದ ದೂಡಿದರು. ಆಗ ಉಸ್ತಾದರ ಬಲ ಕಂಕುಳುವಿನಲ್ಲಿದ್ದ  ಸಣ್ಣದೊಂದು ಫರ್ಸ್ ಕಳೆಗೆ ಬಿತ್ತು. ಆ ಪರ್ಸಿನ ಹೊರ ಭಾಗದ ಜೇಬಿನಲ್ಲಿದ್ದ ಹಣ ಸಮೇತ ಕೆಲವು ಕಾಗದದ ತುಂಡುಗಳು ಹೊರ ಚೆಲ್ಲಿತು. ಈ ಹೊತ್ತಿನಲ್ಲಿ ನಾನು ನನ್ನನ್ನೇ ಮನದಲ್ಲಿ ಅಕ್ಷೇಪಿಸುತ್ತಾ ನಾನು ಈ ಮಸ್ಅಲಃ ಕೇಳಬಾರದಿತ್ತೇನೋ ಉಸ್ತಾದರ ಗೌರವಕ್ಕೆ ತೊಂದರೆಯಾಯಿತೇನೋ ಎಂಬಿತ್ಯಾದಿ ಚಿಂತನೆಯಲ್ಲಿ ಪರಿತಪಿಸುತ್ತಾ ನಿಂತಲ್ಲೇ ನಿಂತುಕೊಂಡಿದ್ದೇ. ಬಸ್ಸು ಕಾಸರಗೋಡಿನ ಭಾಗಕ್ಕೆ ಮುಂದುವರಿಯುತ್ತಾ ಇತ್ತು. ಪ್ರಾಯಶಃ ಹತ್ತದಿನೈದು ನಿಮಿಷ ದಾಟಿರಬೇಕು. ನನ್ನ ಹಿಂದೆ ನಿಂತಿದ್ದ ಉಸ್ತಾದರು ನನ್ನನ್ನು ತನ್ನ ಕೈಯಿಂದ ಮುಟ್ಟುತ್ತಾ ನೀನು ಸಮಯ ಸಿಕ್ಕಿದರೆ ಬೇಕಲಕ್ಕೊಮ್ಮೆ ಬಾ. ಅಲ್ಲಿಗೆ ಬಂದರೆ ಈ ವಿಷಯದ ಕುರಿತು ತಿಳಿಸುವೆ ಎಂದರು. ಉಸ್ತಾದರಿಗೆ ನನ್ನಿಂದಾದ ನೋವನ್ನೇ ನೆನದು ಕೊರಗಿ ಹೋದ ನಾನು ಅದಕ್ಕೆ ಉತ್ತರಿಸುವ ಗೋಜಿಗೆ ಹೋಗದೆ ಸುಮ್ಮನಾದೆ. ಉಸ್ತಾದರೊಂದಿಗಿನ ನನ್ನ ಈ ಎಲ್ಲ ಸಂಪರ್ಕಗಳು ಉಸ್ತಾದರ ಹೃದಯಸ್ಪರ್ಶಿ ಸಂಪರ್ಕಗಳಾಗಿರಲಿಲ್ಲ. ಆದರೆ, ನಾನು ಉಸ್ತಾದರ ನಂಟಸ್ತಿಕೆ ಸಂಬಂಧಿಯಾಗಿ ಪರಿಣಮಿಸಿದಾಗ ( ನನ್ನ ಮನೆಯೊಡತಿಯ ತಂದೆಯಾದ ನನ್ನ ಮಾವನವರು ಬೇಕಲ ಉಸ್ತಾದರ ಸೋದರತ್ತೆಯ ಪೌತ್ರನಾಗಿದ್ದಾರೆ.) ನನ್ನ ಹಾಗೂ ಉಸ್ತಾದರ ನಡುವೆ ಬಾಂದವ್ಯ ಹುಟ್ಟಿತಾದರೂ ನಮ್ಮೆಡೆಯಲ್ಲಿ ಸಂಪರ್ಕಗಳಿಲ್ಲದ ಕಾರಣ ಅದೊಂದು ಹೃದಯಸ್ವರ್ಶಿ ಸಂಬಂಧವಾಗಿ ಬೆಳೆದಿರಲಿಲ್ಲ.

ಆದರೆ, ನಾನು ಬರೆದ ಫತುಹುಲ್ ಮುಈನ್ನ ಕನ್ನಡಾನುವಾದವು ನಮ್ಮೆಡೆಯ ಮೇಲಿನ ಸಂಬಂಧದೊಂದಿಗೆ ಬಲವಾದ ಸಂಬಂಧವನ್ನೇ ಬೆಳೆಸಿತು. ಈ ಸಂಬಂಧವು ಮತ್ತೆ ದೂರವಾಣಿ ಮೂಲಕ ಮಾತಾನಾಡುವವರೆಗೆ ತಲುಪಿತು. ನಾನು ಕನ್ನಡ ಭಾಷೆಗೆ ಅನುವಾದಿಸಿದ ಫತುಹುಲ್ ಮುಈನ್ ಎಂಬ ಫಿಕ್ಹ್ ಗ್ರಂಥದ ಭಾಷಾ ಅಸಂತುಲಿತತೆಯನ್ನು ಪರಿಶೋಧಿಸಲು ಪ್ರೋ: ಬಿ.ಎಂ. ಇಚ್ಲಂಗೋಡ್ರವರಲ್ಲಿ ಕೊಟ್ಟಿದ್ದೆ. ಹಲವು ಕೆಲಸ ಕಾರ್ಯಗಳಲ್ಲಿ ಬಿ.ಎಂ. ರವರ ನಿರತತೆ ಒಂದುವರೆ ವರ್ಷದವರೆಗೆ ಅದರ ಅಸಂತುಲಿತತೆಯ ಕುರಿತಂತಿರುವ ಅವರ ಪರಿಶೋಧನಾ ನೋಟವನ್ನು ವಿಳಂಬಿಸಿತ್ತು. ಆ ಬಳಿಕ ಅದರ ಅರಬಿಯಲ್ಲಿರುವ ಮೂಲ ಗ್ರಂಥದ ಆಶಯದ ಅಸಂತುಲಿತತೆಯನ್ನು ಪರಿಶೋಧಿಸಲು ಅದರ ಪ್ರಕಾಶಕರಾದ ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಮರ್ಸಿಸ್ ಬುಕ್ ಹೌಸ್ನ ಮಾಲಕರಾದ ಪ್ರಸ್ತುತ ಗ್ರಂಥದ ಪ್ರಕಾಶಕ ಸನ್ಮಾನ್ಯ ಆರ್ ಮುಹಮ್ಮದ್ ಮದನಿಯವರು ಹಾಗೂ ನಾನು ಬೇಕಲ ಉಸ್ತಾದರ ಸನ್ನಿಧಾನಕ್ಕೆ ಕೊಂಡೊಯ್ಯಲು ಬೇಕಲಕ್ಕೆ ಹೋದೆವು. ಇದು ಉಸ್ತಾದರ  ಬೇಕಲದಲ್ಲಿನ ಕೊನೆಯ ಸುದೀರ್ಘವಾದ ದರ್ಸ್ ವೃತ್ತಿಯಿಂದ ಬಿಡುಗಡೆಗೊಂಡ ಶಹಬಾನ್ ತಿಂಗಳಾಗಿತ್ತು. ನಂತರ  ಅನುವಾದಿತ ಪತ್ಹುಲ್ ಮುಈನ್ ಅವರ ಕೈಯಲ್ಲಿ ಕೊಟ್ಟೆವು. ಆಗ ಬೇಕಲ ಉಸ್ತಾದರು ನಮ್ಮದೊಂದಿಗೆ ಹೇಳಿದರು ಶವ್ವಾಲ್ ಸುನ್ನತ್ ಉಪವಾಸದ ಬಳಿಕ ತಿರುಗಿಸುವೆನೆಂದರೂ ಬಹುತೇಕ ಕಾರ್ಯನಿರತತೆಯ ಉಸ್ತಾದರಿಗೆ ಈ ಕನಿಷ್ಠ ಅವಧಿಯಲ್ಲಿ ನೋಡಿ ಮುಗಿಸಲಿಕ್ಕಾಗದು ಎಂದು ನಂಬಿದ್ದ ನನ್ನ ಹೃದಯಕ್ಕೆ ಉಸ್ತಾದರ  ಆ ಮಾತು ಅರಗಿಸಿಕೊಳ್ಳಲಿಕ್ಕಾಗಲಿಲ್ಲವಾದರೂ ಶವ್ವಾಲ್ 8 ರಂದು ಪ್ರಕಾಶಕರಾದ ಆರ್. ಮುಹಮ್ಮದ್ ಮದನಿಯವರು ಉಸ್ತಾದರಿಗೆ  ಫೋನಾಯಿಸಿದಾಗ ಆತ್ತ  ಕಡೆಯಿಂದ ಉಸ್ತಾದರು ನಾನು ಅದನ್ನು ರಂಝಾನಿನ ತರಾವೀಹ್ನ ಬಳಿಕ 30 ದಿನದ ರಾತ್ರಿಗಳ ಯಾಮದಲ್ಲಿ  ಪೂರ್ಣವಾಗಿ ನೋಡಿಯಾಗಿದೆಯೆಂದೂ ಹಾಗೂ ಇವತ್ತೇ ಮನೆಗೆ ಬನ್ನಿ ಎಂದು ನಮ್ಮನ್ನು ಮನೆಗೆ ಕರೆದ ಉಸ್ತಾದರ ಸಮಯ ಪ್ರಜ್ಞೆಯಲ್ಲಿರುವ ಅವರ ಇಚ್ಚಾಶಕ್ತಿಯು ನನ್ನನ್ನು ಆಶ್ಚರ್ಯಗೊಳಿಸಿದ್ದು ಸುಳ್ಳಲ್ಲ. ಇದರಿಂದಾಗಿ ನಾನು ಈಗಾಗಲೇ ತಿಳಿಸಿರುವಂತೆ ಉಸ್ತಾದರಿಗೆ ಗ್ರಂಥ ಪಾರಾಯಣವೆಂಬುದು ಆ ಅಸಮಾನ

ವ್ಯಕ್ತಿಯಾದ್ಯಂತವಾಗಿ ಅಂತರ್ಲೀನವಾದ ಆಪಾರ ಇಲ್ಮೀ ಶಕ್ತಿಯ ಸ್ವಾದೀನವೇ ಆಗಿತ್ತೆಂಬುದು ನನಗೆ ಮಗದೊಮ್ಮೆ ರುಜುವಾಯಿತು. ಹಾಗೆ ನಾವಿಬ್ಬರೂ ಉಸ್ತಾದರ ಮನೆಗೆ ತಲುಪಿದೆವು. ಈ ಹೊತ್ತಿನಲ್ಲಿ ನನ್ನ ಅನುವಾದದ ಹಾಗೂ ಮೂಲಗ್ರಂಥದೊಂದಿಗೆ ಆಶಯದಲ್ಲಿ ಸಂತುಲಿತತೆಯ ಕುರಿತು ನಾನು ಉಸ್ತಾದರಲ್ಲಿ ಕೇಳಿದಾಗ ಉಸ್ತಾದರ ಮುಖದಲ್ಲಿ ಮಂದಹಾಸದ ಛಾಯೇ ಒಮ್ಮಿಂದೊಮ್ಮೆಲೆ ಪುಟಿದೇಳುತ್ತಾ ಅರಬಿಯಲ್ಲಿರುವ ಮೂಲಗ್ರಂಥದ ಆಶಯಕ್ಕೆ ಒಂದೆರೆಡು ತಿದ್ದುಪಡಿಗಳನ್ನು ಬಿಟ್ಟರೆ ನಿಮ್ಮ ಸಂಪೂರ್ಣ ಯೋಜ್ಯ ರೀತಿಯಲ್ಲಿ ತಾವು ಅನುವಾದಿಸಿದ್ದೀರೆಂದರಲ್ಲದೆ ನನಗೆ ( ಬೇಕಲ ಉಸ್ತಾದ್) ಕೆಲವು ಸಾಮರ್ಥ್ಯಗಳಿವೆ. ಹಾಗೆನೇ ತಮಗೂ (ನನಗೆ) ಕೆಲವು ಸಾಮರ್ಥ್ಯಗಳಿವೆ. ಅಂತೆಯೇ ನಮ್ಮಲ್ಲಿ ಹಲವರಿಗೂ ಅವರದ್ದೇ ಆದ ಸಾಮರ್ಥ್ಯಗಳಿವೆ. ಆದರೆ ಈ ಮೌಲ್ಯಾಧಾರಿತ ಸಾಮರ್ಥ್ಯಗಳು ಪ್ರಸಕ್ತ ಉಪಯೋಗಕ್ಕೆ ಬಾರದೆ ಪೋಲಾಗುತ್ತಿದೆ. ಆದ್ದರಿಂದ ಈ ತೆರನ ಸಾಮರ್ಥ್ಯಗಳು ಒಂದುಕೂಡಿಸಿ ಪರಿಶುದ್ಧ ಸುನ್ನತ್ತ್ ಜಮಾಅತ್ತಿನ ಏಳಿಗೆಗೆ ಉಪಯುಕ್ತವಾಗುವ ರೀತಿಯಲ್ಲಿ ಉಪಯೋಗಿಸಬೇಕು. ಈ ಉಪಯೋಗದಲ್ಲಿ ಸಾಂಘಿಕ ಭಿನ್ನತೆ ಎಂದೂ ತಡೆಯಾಗಲೇಬಾರದೆಂದು ಬೇಕಲ ಉಸ್ತಾದ್ ನಮ್ಮಿಬ್ಬರೊಂದಿಗೆ ಏರು ಧ್ವನಿಯಲ್ಲಿ ತುಂಬಾ ಭಾವುಕರಾಗಿ ಹೇಳಿದ ಈ ಹೇಳಿಕೆ ಆ ಬಳಿಕ ಕೆಲವೊಮ್ಮೆಯಾದರೂ ನನ್ನ ಹೃದಯದಲ್ಲಿ ಕಂಪಿಸುತ್ತಲೇ ಇತ್ತು. ಅವರ ಮರಣದ ಬಳಿಕವೂ ನನ್ನ ಹೃದಯವನ್ನು ಅದು ಅದುಮುತ್ತಲೇ ಇದೆ. ಆದರೆ, ಸಾಂಘಿಕ ಸಂಕುಚಿತತೆ ಮುಗಿಲು ಮುಟ್ಟಿರುವ ಪ್ರಸಕ್ತ ಸನ್ನೀವೇಶದಲ್ಲಿ ಇದರ ಇಂಪ್ಲಿಮೆಂಟ್  ತುಂಬಾ ಕಷ್ಟಸಾಧ್ಯವಾಗಿದೆಯೆಂಬ ನಿಜಸ್ಥಿತಿ ಉಸ್ತಾದರಿಗೆ ತಿಳಿಯದೆ ನಮ್ಮಲ್ಲಿ ಈ ಮಾತನ್ನು ಅವರು ಹೇಳಿಲ್ಲವಾದರೂ ಆ ವಿದ್ವುತ್ತು ಚೇತನದ ಹೃದಯದಲ್ಲಿ ಈ ಆಶಯ ಅದುಮತ್ತಲೇ ಇತ್ತೆಂಬುದನ್ನು ಮಾನ್ಯ ಅನುವಾಚಕರು ಮನಗಾಣಬೇಕಿದೆ.

ಅಂದು ನಮ್ಮೊಂದಿಗೆ ತುಂಬಾ ಹೊತ್ತು ಮಾತಾಡಿದ ಉಸ್ತಾದರು ತನ್ನ ಈ ತೆರನ ಮಿಗತೆಯ ಹಲವಾರು ಕಾರಣಗಳಿದ್ದರೂ ನಿಮ್ಮ (ನನ್ನ) ತಾತರೂ ಆದ ಗೌರವಾನ್ವಿತ ಅಡ್ಯಾರ್ ಕಣ್ಣೂರು ಅಲ್ಹಾಜ್ ವಿ.ಕೆ ಮಹಮ್ಮದ್ ಮುಸ್ಲಿಯಾರ್ರವರ ಪಾತ್ರವನ್ನು ಹೇಳಲೇಬೇಕಾಗಿದೆಯೆಂದು ಉಸ್ತಾದರು ನಮ್ಮಲ್ಲಿ  ಹೇಳಿದರು. ಅದೇನಂದರೆ, ಬೇಕಲ ಉಸ್ತಾದರು ಪ್ರಥಮವಾಗಿ ತನ್ನ ವೃತ್ತಿಯನ್ನು ಆರಂಭಿಸುವುದು ಅಡ್ಯಾರ್ ಸಮೀಪದ ಬೈತಾರ್ನಲ್ಲಾಗಿತ್ತು. ಆ ಹೊತ್ತಿನಲ್ಲಿ ಅಡ್ಯಾರು ಕಣ್ಣೂರ್ನಲ್ಲಿ ನನ್ನ ತಾತರಾದ ಗೌರವಾನ್ವಿತ ಅಡ್ಯಾರು ಕಣ್ಣೂರು ಮುಹಮ್ಮದ್ ಹಾಜಿಯವರ ಪ್ರಸಿದ್ಧವಾದ ದರ್ಸ್ ನಡೆಯುತ್ತಿತ್ತು. ಚಿಕ್ಕಂದಿನಿಂದಲೇ ಮುಹಮ್ಮದ್ ಹಾಜಿಯವರ ಮತ ಪ್ರಸಂಗ ಹಾಗೂ ಮಹಿಮೆಯನ್ನು ಕೇಳಿರುವ ಬೇಕಲ ಉಸ್ತಾದರಿಗೆ ಅವರನ್ನೂಮ್ಮೆ ಕಂಡು ಆಶೀರ್ವಾದ ಪಡೆಯಲೆಂದು ಬೈತಾರ್ನಿಂದ ಕಣ್ಣೂರು ಮಸೀದಿಗೆ ಬಂದಾಗ ಮುಹಮ್ಮದ್ ಹಾಜಿಯವರು ಏನೂ ಮಾತಾನಾಡದೆ ನನ್ನ ಶರೀರದಾದ್ಯಂತ ಹಲವು ಬಾರಿ  ತನ್ನ ದೃಷ್ಠಿಯನ್ನು ಹಾಯಿಸಿದರು. ಅಲ್ಪ ವಿರಾಮದ ಬಳಿಕ ಯಾವ ಮಸೀದಿಯಲ್ಲಿ ಕೆಲಸವೆಂದು ಕೇಳಿದರು. ಅದಕ್ಕೆ ಬೇಕಲ ಉಸ್ತಾದರು ಬೈತಾರ್ನಲ್ಲಿ ಎಂದಾಗ ನೀವು ಅಲ್ಲಿ ನಿಲ್ಲಬೇಡಿಯೆಂದಲ್ಲ ನಿಲ್ಲಲೇಬಾರದು. ನೀವು ದೊಡ್ಡ ಪ್ರಸಿದ್ಧಿಯಾಗಬೇಕಾದವರು. ನೀವು ಅಲ್ಲಿ ನಿಂತರೆ ಮುಂದುವರಿಯಲಸಾಧ್ಯವಾಗುವುದು. ಎಂದು ಖಡಾಖಂಡತವಾಗಿ ಹೇಳಿದ ಮುಹಮ್ಮದ್ ಹಾಜಿಯವರು ಅಲ್ಲಿನ ಆಡಳಿತ ಮಂಡಳಿಯವರಿಗೆ ಈ ಕುರಿತು  ನಾನು ತಿಳಿಸುವೆ ಎಂದು ನನ್ನಲ್ಲಿ ಹೇಳಿದ ಮುಹಮ್ಮದ್ ಹಾಜಿಯವರು ತನ್ನ ಶಿಷ್ಯನನ್ನು ಕರೆದು ಕಾಗದದ ಹಾಳೆಯೊಂದನ್ನು ತರಲು ಹೇಳಿದರು. ನಂತರ ಆ ಹಾಳೆಯಲ್ಲಿ ಅಲ್ಲಿನ ಆಡಳಿತ ಮಂಡಳಿಗೆ ಬರೆಯುತ್ತಾ ನಿಮ್ಮ ಉಸ್ತಾದ್ ನನಗೆ ಬೇಕು. ಅಲ್ಲಿಗೆ ನಾನು ಬೇರೆ ಉಸ್ತಾದರನ್ನು ಕಳುಹಿಸುವೆ. ನನ್ನ ಈ ಬರಹದಲ್ಲಿ ನಿಮಗೆ ನೋವಾದರೆ ನನಗೆ ಕ್ಷಮಿಸಿ ಎಂದು ಬರೆದು ತನ್ನ ಶಿಷ್ಯನ ಕೈಯಲ್ಲಿ ಕೊಟ್ಟು ಅಲ್ಲಿನ ಆಡಳಿತ ಮಂಡಳಿಗೆ ಕಳುಹಿಸಿಕೊಟ್ಟರೆಂದು ಬೇಕಲ ಉಸ್ತಾದರು ನಮ್ಮಲ್ಲಿ ಹೇಳಿದರಲ್ಲದೆ ಅದೇ ದಿನ ಉಳ್ಳಾಲ ತಂಙಲ್ರವರನ್ನು ನೋಡಿ ಬರುವ ಉದ್ದೇಶದಿಂದ ಬೇಕಲ ಉಸ್ತಾದ್ ಉಳ್ಳಾಲಕ್ಕೆ ಹೋದಾಗ ತಂಙಳ್ರವರು ಕಳೆದ ಒಂದು ವಾರದಿಂದ ನಾನು ನಿನ್ನ ಬರುವಿಕೆಯನ್ನು ಕಾಯುತ್ತಾ ಇದ್ದೇನೆ. ನೀನು ಸೂರಿಂಜೆ ಯಲ್ಲಿ ಕೆಲಸಕ್ಕೆ ನಿಲ್ಲಬೇಕೆಂದು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ನಾನು ಈಗಾಗಲೇ ಮಾಡಿದ್ದೇನೆಂದುತಂಙಳ್ ಹೇಳಿದ್ದನ್ನು ನನಗೆ ಈಗ ನೆನೆಯುವಾಗ ನನ್ನ ಈ ಮಿಗತೆಯ ಹಾಗೂ ಪ್ರಸಿದ್ಧಿಯ ಹಿಂದೆ ಹಲವಾರು ಕಾರಣಗಳಿದ್ದರೂ ಗೌರವಾನ್ವಿತ ಅಡ್ಯಾರ್ ಕಣ್ಣೂರು ಮುಹಮ್ಮದ್ ಹಾಜಿಯವರ ಪಾತ್ರ ಮತ್ತೆಲ್ಲಕ್ಕಿಂತ ಮಿಗಿಲೆಂಬುದನ್ನು ನಮ್ಮಿಬ್ಬರ ಮುಂದೆ ಬೇಕಲ ಉಸ್ತಾದ್ ಹೇಳಿದ್ದನ್ನು ಸ್ಮರಿಸುವಾಗ ಬೇಕಲ ಉಸ್ತಾದರಿಗೆ ಅವರಲ್ಲಿದ್ದ ಅಪಾರವಾದ ಗೌರವವನ್ನು ನಮಗೆ ತಿಳಿಯಬಹುದಾಗಿದೆ. ಬೇಕಲ ಉಸ್ತಾದರಿಗೆ ನನ್ನ ತಾತರಾದ ಗೌರವಾನ್ವಿತ ಮುಹಮ್ಮದ್ ಹಾಜಿಯವರಲ್ಲಿದ್ದ ನಿಷ್ಕಪಟವಾದ ಅಳೆಯಲಾಗದ ಸ್ನೇಹ ಹಾಗೂ ಗೌರವದ ಭಾಗವೆಂಬಂತೆ ಎಂಬತ್ತರ ದಶಕದ ಕೊನೆಯಲ್ಲಿ ಗೌರವಾನ್ವಿತ ಮುಹಮ್ಮದ್ ಹಾಜಿಯವರ ಹಾಗೂ ಅವರ ಕುಟುಂಬದ  ಕಿರುಪರಿಚಯವೆಂಬಂತೆ 30 ಕ್ಕೂ ಮಿಕ್ಕ ಪುಟಗಳಿರುವ ಒಂದು ಪುಸ್ತಕವನ್ನು ತನ್ನ ಬೇಕಲದ ದರ್ಸ್ ವಿದ್ಯಾರ್ಥಿಗಳಿಂದ ಉಸ್ತಾದರು ಹೊರತಂದದ್ದು ಉಸ್ತಾದರಿಗೆ ತನ್ನ ವೃತ್ತಿ ಜೀವನದ ಪ್ರಾರಂಭದಲ್ಲಿರುವ ಅಡ್ಯಾರ್ ಕಣ್ಣೂರು ಮುಹಮ್ಮದ್ ಹಾಜಿಯವರಿಂದುಂಟಾದ ಪ್ರಸ್ತುತ ಸಂಭವ ಕಾರಣವಾಗಿರಬಹುದೆಂಬುದನ್ನು ಅನುಸ್ಮರಿಸುವುದರೊಂದಿಗೆ ಉಸ್ತಾದರಿಗೆ ಅವರಲ್ಲಿ ಇದ್ದ ನಿಷ್ಕಪಟವಾದ ಸ್ನೇಹ ಹಾಗೂ ಗೌರವದ ಆಳವನ್ನು ಮನವರಿಕೆ ಮಾಡಬಹುದಾಗಿದೆ. ಬೇಕಲ ಉಸ್ತಾದರು ನಮ್ಮ ಜಿಲ್ಲೆಯ ಕೆಲವೇ ಕೆಲವು ಶ್ರೇಷ್ಠರಾದ ಮುಫ್ತಿಗಳಲ್ಲಿ  ಒಬ್ಬರು. ನನ್ನ ಅರಿವಿನ ಆಧಾರದಲ್ಲಿ ಹೇಳುವುದಾದರೆ ಜಿಲ್ಲೆಯ ಇತಿಹಾಸದಲ್ಲಿ ಜಿಲ್ಲೆಯವರೇ ಆಗಿರುವವರಲ್ಲಿ ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ರವರನ್ನು ಬಿಟ್ಟರೆ ಮತ್ತೆ ಬೇಕಲ ಉಸ್ತಾದರದ್ದೇ ಮೇಲುಗೈ.

ಇದರರ್ಥ ಇವರಿಬ್ಬರ ಹೊರತಾದ ಮುಫ್ತಿಗಳು ಇಲ್ಲವೆಂದಲ್ಲ. ಬದಲಾಗಿ ಇವರೀರ್ವರು ಈ ರಂಗದಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಗಳಿಸಿದವರೆಂಬುದರಲ್ಲಿ ಎರಡು ಮಾತಿಲ್ಲ. ಕಾರಣ, ಈ ಮುಫ್ತಿದ್ವಯರು  ಫತ್ವವೊಂದನ್ನು ಕೊಡುವಾಗ ಪಾಲಿಸಬೇಕಾದ ನಿಯಮಗಳನ್ನು ಕ್ಲಪ್ತವಾಗಿ ಪಾಲಿಸುತ್ತಿದ್ದರು. ಆದರೆ, ನಾನು ಅನೌಪಚಾರಿಕವಾಗಿ ತಿಳಿದಿರುವಂತೆ ಬೇಕಲ ಉಸ್ತಾದರು ಕುತ್ತಾರ್ನಿಂದ ಪ್ರಕಟವಾಗುವ ಅಲ್-ಅನ್ಸಾರ್ ಸಾಪ್ತಾಹಿಕದ ಪಧಾನ ಸಂಪಾದಕರಾಗಿರುವುದರಿಂದ ಅದಕ್ಕೆ ಬರುವ ದೀನಿ ಪ್ರಶ್ನೆಗಳಿಗೆ ಉತ್ತರವೆಂಬ ನೆಲೆಯಲ್ಲಿ ಅದರಲ್ಲಿ ಅವರು ನೀಡುತ್ತಿರುವ ಫತ್ವಗಳಾದ್ದರಿಂದ ಸ್ವಾಭಾವಿಕವಾಗಿ ಆ ಫತ್ವಗಳು ಲಿಖಿತ ರೂಪವನ್ನು ತಾಳಿದ್ದು ಬೇಕಲ ಉಸ್ತಾದರ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಮೇಲಾಗಿ ಅದೊಂದು ಮಾಸಿಕವಾಗಿರದೆ ಸಾಪ್ತಾಹಿಕವಾಗಿರುದುರಿಂದ ಫತ್ವಗಳು ಸಂಖ್ಯೆಯನ್ನು ವೃದ್ಧಿಸಿದೆ. ಆದರೆ ಇಂತಹ ಒಂದು ಸನ್ನೀವೇಶವನ್ನು ಮಿತ್ತಬೈಲ್ ಉಸ್ತಾದರಿಗೆ ಅವರ ಹಿತೈಷಿಗಳು ಹಾಗೂ ಶಿಷ್ಯಯಂದಿರುಗಳಿಂದ ಒದಗಿಸಿದ್ದರೆ ಮುಫ್ತಿದ್ವಯರ ಮೆರುಗಿನಲ್ಲಿ ಸಾಮಾನತೆ ಕಾಣಬಹುದಿತ್ತು. ಆದರೆ ಅದು ಸಂಭವಿಸಿಲ್ಲ. ಹಾಗೇನೆ ಪತ್ವಗಳ ಸಂಖ್ಯೆಯಲ್ಲಿ ಕಡಿತವಿದ್ದರೂ ಸರಿಸೂಮಾರು

ಈ ತೆರನ ನಿಯಮಗಳನ್ನು ಪಾಲಿಸಿ ಲಿಖಿತ ರೂಪದಲ್ಲಿ ಫತ್ವಗಳು ನೀಡುತ್ತಿದ್ದ ಸರಳಪಥ ಮಾಸಿಕದ ಪ್ರಧಾನಕಾರ್ಯದರ್ಶಿಯೂ ಹಾಗೂ ಅದರ ರೂವಾರಿಯೂ ಆದ ಅರಂತೋಡಿನ ಮಾಜಿ ಮುದರ್ರಿಸರಾದ ದಿವಂಗತ ಬಹು: ಶಾಹ್ ಮುಸ್ಲಿಯಾರ್ರವರ ಫತ್ವಗಳ ನಿರ್ವಹಣೆಯನ್ನೂ ಮರೆಯಲಾಗದು. ಬಹು: ಬೇಕಲ ಉಸ್ತಾದ್ ಹಾಗೂ ಬಹು ಶಾಹ್ ಮುಸ್ಲಿಯಾರ್ರವರ ಹಿತೈಷಿಗಳು ಹಾಗೂ ಶಿಷ್ಯಂದಿರಲ್ಲಿ ನನ್ನದೊಂದು ಸಲಹೆಯೇನಂದರೆ ಇವರಿಬ್ಬರು ಈ ವರೆಗೆ ಕೊಟ್ಟಂತಹ ಲಿಖಿತ ರೂಪದಲ್ಲಿರುವ ಫತ್ವಗಳು ಹಾಗೂ ವೈಯಕರವಾಗಿ ಕೊಟ್ಟ ಫತ್ವಗಳು ಲಭ್ಯವಿದ್ದಲ್ಲಿ ಅದನ್ನು ಸಂಗ್ರಹಿಸಿ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕೆಂದು ತುಂಬಾ ಕಳಕಳಿಯಿಂದ ಈ ಮೂಲಕ ವಿನಂತಿಸುತಿಸುತ್ತಿದ್ದೇನೆ.  ಈ ವಿಷಯಕ್ಕೆ ಸಂಬಂಧಿಸಿ ಒಂದು ಬಾರಿ ಬೇಕಲ ಉಸ್ತಾದರಲ್ಲಿ ಮೌಖಿಕವಾಗಿಯೂ ಮಗದೊಂದು ಬಾರಿ ದೂರವಾಣಿ ಮೂಲಕ ವಿನಂತಿಸಿದ್ದೆ. ಇದು ನನ್ನ ಪರಿಗಣನೆಯಲ್ಲಿದೆ ಎಂದು ಅವರು ನನ್ನಲ್ಲಿ ಹೇಳಿದ್ದನ್ನು ನಾನಿಲ್ಲಿ ಜ್ಞಾಪಿಸಲಿಚ್ಚುಸುತ್ತೇನೆ. ಶೈಖುನಾ ಬೇಕಲ ಉಸ್ತಾದರ ಜನನದಿಂದ ಹಿಡಿದು ಅಸ್ತಂಗತರಾದವರೆಗಿನ ಸಂಪೂರ್ಣ ವಲಯಗಳನ್ನು ಮೆನ್ಷನ್ ಮಾಡುವ Biography ಯನ್ನು  ಅಲ್- ಆನ್ಸಾರ್ ಪತ್ರಿಕಾ ಬಳಗದವರು ಹೊರತರಬಹುದೆಂದು ಆಶಿಸುತ್ತೇನೆ. ರಕ್ತದಾನದ ಕುರಿತಂತಿರುವ ಕರ್ಮಶಾಸ್ತ್ರದ ವೀಕ್ಷಣದಲ್ಲಿ ರಕ್ತವನ್ನು ರೋಗಿಯ ಶರೀರಕ್ಕೆ ನೀಡುವುದು ಪರಿಣಾಮಕಾರಿಯಾಗಿದ್ದು ಹಾಗೂ ಇದರ ಹೊರತಾದ ಇತರ ಶುದ್ಧತೆಯಿರುವ ದ್ರಾವಕ ನೀಡುವುದರಿಂದ ಅನುಕೂಲ ಪರಿಣಾಮ ಬೀರುವುದಿಲ್ಲವೆಂದು ರೋಗಿಯ ಅನುಭವ ಜ್ಞಾನದಿಂದಲೋ ವಿಶ್ವಾಸಾರ್ಹನಾದ ಡಾಕ್ಟರ್ರೊಬ್ಬರು ಸೂಚಿಸುವುದರಿಂದಲೋ ಮನವರಿಕೆಯಾಗುವಾಗ ಈ ಚಿಕಿತ್ಸೆ ಸಮ್ಮತಾರ್ಹವಾಗಿದೆ. ಇದು ಶಾಫಿಈ ಮದ್ಹಬಿನ ಪ್ರಖ್ಯಾತ ಗ್ರಂಥಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವಾಗ ಸೂರಃ ಮಾಯಿದಃ ಸೂಕ್ತವನ್ನು ಆಧಾರವಾಗಿಸಿ ರಕ್ತದಾನ ಮಾಡಬಹುದೆಂದು ಬೇಕಲ ಉಸ್ತಾದರು ಹೇಳಿದರೆಂಬ ಸಾಹಿತಿಯೊಬ್ಬರ ಲೇಖನವು ಆನ್‌ಲೈನು ಮಾಧ್ಯಮವೊಂದರಲ್ಲಿ ನನಗೆ ಓದಲುದ್ಯುಕ್ತವಾಯಿತಾದರೂ ಇದು ಪೂರ್ಣವಾಗಿ ವಿಶ್ವಾಸಯೋಗ್ಯವಾಗಿರಬಹುದೇ ಎಂಬ ಸಂಶಯ ನನನ್ನು ಕಾಡುತ್ತಿದೆ. ನಮ್ಮ ವಿದ್ವಾಂಸರು ಅದರಲ್ಲೂ ಅಗ್ರಗಣ್ಯ ಮುಫ್ತಿಯರು ಈ ತೆರನ ಖರ್ಆನಿನ ಅಪ್ಪಟವಾದ ಸಂಶೋಧನೆಗೆ ಒಂದಿಂಚು ಮುಂದೆ ಬರಲಾರರು ಎಂಬುದನ್ನು ನಾವು ಮನಗಾಣಬೇಕಾಗಿದೆ.

ನಮ್ಮ ವಿದ್ಯಾಂಸರು ಫಿಕ್ಹ್ಗೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಾಚೀನ ಹಾಗೂ ಆರ್ವಾಚೀನ ಉಲಮಾಗಳ ಹೇಳಿಕೆಯನ್ನು ಅದೇ ರೀತಿಯಲ್ಲಿ ಉಲ್ಲೇಖಿಸುವ ಪರಿಪಾಠವನ್ನೇ ಈ ತನಕ ಮುಂದುವರಿಸಿರುವಾಗ ಖುರ್ಆನಿನ ಸೂಕ್ತವನ್ನು ಈ ವಿಷಯಕ್ಕೆಯೆಂದಲ್ಲ ಖರ್ಆರ್ ಹಾಗೂ ಹದೀಸ್ನಲ್ಲಿ ಸ್ಪಷ್ಟವಾಗಿ ಹೇಳಿರದ ಸಂಶೋದನೆಗೆ ಉದ್ಯಕ್ತವಾಗಿರುವ ಯಾವ ವಿಷಯಕ್ಕೂ ಖುರ್ಆನ್ ಹಾಗೂ ಹದೀಸನ್ನು ನೇರವಾಗಿ ಆಧಾರವಾಗಿಸುವ ಅಗತ್ಯವಿಲ್ಲವೆಂದು ಸಾಂದರ್ಭಿಕವಾಗಿ ಹೇಳ ಬಯಸುತ್ತೇನೆ. ನನ್ನ ಈ ಬರಹ ಕೇವಲ ನನಗೆ ಉಸ್ತಾದರಿಂಟಾದ ಅನುಭವಗಳೇ ಹೊರತು ಇದರಾಚೆಗೆ ಅವರಿಗೆ ಸಂಬಂಧಿಸಿದ ವಿಷಯ ವ್ಯಾಪ್ತಿಯ ಕೊರತೆ  ಇದೆಯೆಂದು ಅರ್ಥ ಕಲ್ಪಿಸುವುದು ಮೂರ್ಖತನವಾದೀತು. ನನಗೂ ನನ್ನ ಬರಹಕ್ಕೂ ಇತಿಮಿತಿ ಒಂದಡೆಯಾದರೆ ಅವರ ಕುರಿತ ಸಂಪೂರ್ಣ ಇತಿಹಾಸದ ಅರಿವಿನ ಕೊರತೆ ಮತ್ತೊಂದಡೆಯಾದರೆ ಅವರಿಗೆ  ಅವರ ಸಂಘಟನಾತ್ಮಕ ಹಾಗೂ ಅವರ ರಾಜಕೀಯ ದೃಷ್ಠಿಕೋನದ ಕಾರ್ಯತತ್ಪರತೆ ಹಾಗೂ ನಿರತತೆಯ ಕಡೆಗೆ ನನ್ನ ಬರಹ ತೀರಾ ಬೊಟ್ಟು ಮಾಡಿಲ್ಲವೆಂಬುದು ಮಗದೊಂದಡೆಯಾಗಿದೆಯೆಂಬುದು ಅನುವಾಚಕರು ಗಮನಿಸಬೇಕಾಗಿದೆ.

  • ಎ.ಕೆ. ಮುಹಮ್ಮದ್  ಹನೀಫ್ ಅಡ್ಯಾರು

        

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು