ಕಣ್ಣೂರು(11-12-2020): ತನ್ನ ಮನೆಯ ಹಿತ್ತಲಲ್ಲಿ ಬಟ್ಟೆ ಒಗೆಯುತ್ತಿದ್ದ ಗೃಹಿಣಿಯು ಅನಿರೀಕ್ಷಿತವಾಗಿ ಭೂಮಿಯೊಳಗೆ ಹೂತು ಹೋದಳು. ಬಳಿಕ ಆಕೆ ಕಂಡು ಬಂದಿದ್ದು ನೆರೆಮನೆಯ ಬಾವಿಯಲ್ಲಿ! ಇಂತಹ ಒಂದು ವಿಚಿತ್ರ ಘಟನೆಯು ಹತ್ತಿರದ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಇರಿಕ್ಕೂರು ಸಮೀಪದ ಅಯಿಪ್ಪುಝ ಎಂಬಲ್ಲಿ ನಡೆದಿದೆ.
ನೆರೆಮನೆಯ ಬಾವಿಯು ಸುಮಾರು ಹತ್ತು ಮೀಟರ್ ದೂರದಲ್ಲಿದ್ದರೂ ಗೃಹಿಣಿಯು ಭೂಮಿಯೊಳಗಿಂದಲೇ ಜಾರಿಕೊಂಡು ಅಲ್ಲಿಗೆ ಮುಟ್ಟಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಂದ ಹಾಗೆ ಆಕೆಯು ದೊಡ್ಡ ಗಾಯಗಳೇನೂ ಇಲ್ಲದೇ ಪವಾಡಸದೃಶ್ಯವಾಗಿ ಪಾರಾಗಿದ್ದಾಳೆ. ಅಯಿಪ್ಪುಝದ ಕೆ.ಎ ಅಯ್ಯೂಬ್ ಎಂಬವರ ಪತ್ನಿ, ನಲ್ವತ್ತೆರಡು ವರ್ಷ ವಯಸ್ಸಿನ ಉಮೈಬಾ ಎಂಬವರೇ ಈ ವಿಲಕ್ಷಣ ಸನ್ನಿವೇಶಕ್ಕೆ ಸಿಲುಕಿ ಪಾರಾದವರು.
ಲೋಹದ ಸರಳುಗಳಿಂದ ಮುಚ್ಚಲಾದ ಬಾವಿಯೊಳಗಿಂದ ಬೊಬ್ಬೆ ಕೇಳಿದ ನೆರಮನೆಯ ಮಹಿಳೆಯು ಬಾವಿಯನ್ನು ಇಣುಕಿ ನೋಡಿದಾಗ ಅಲ್ಲಿ ಉಮೈಬಾ ಇರುವುದು ಕಂಡು ಬಂದಿತ್ತು. ಆಕೆ ತಕ್ಷಣವೇ ಊರವರನ್ನು ಕರೆದಳು. ಬಳಿಕ ಊರವರ ಸಹಕಾರದಿಂದ ಪೋಲೀಸರು ಮತ್ತು ಅಗ್ನಿಶಾಮಕ ದಳದವರು ಜೊತೆ ಸೇರಿ ಮಹಿಳೆಯನ್ನು ರಕ್ಷಿಸಿದರು. ಹತ್ತಿರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆಗೆ ಕಣ್ಣೂರಿನ ಎಕೆಜಿ ಆಸ್ಪತ್ರೆಗೆ ಸೇರಿಸಲಾಯಿತು.
ಭೂ ಕುಸಿತವಾದ ಸ್ಥಳದಿಂದ ಬಾವಿಯವರೆಗೂ ಒಳಗಿಂದಲೇ ಸುರಂಗವೊಂದು ರೂಪುಗೊಂಡಿದೆ. ಘಟನೆಯ ವಿಚಾರವು ಕಾಡ್ಗಿಚ್ವಿನಂತೆ ಹರಡಿ, ಘಟನಾ ಸ್ಥಳದಲ್ಲಿ ಜನಜಂಗುಳಿಯೇ ಕಂಡು ಬಂದಿದೆ. ಕೆಲವರು ಸುರಂಗ ಮತ್ತು ಬಾವಿಯ ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲೂ ಹರಿಯಬಿಟ್ಟಿದ್ದಾರೆ.