ಬೆಂಗಳೂರಿನ ಗುಂಡಿ ಮುಚ್ಚಲು ಆಗದಿದ್ದರೆ ನನಗೆ ಜವಾಬ್ದಾರಿ ಕೊಡಿ, ನಾನು ಮಾಡಿ ತೋರಿಸುತ್ತೇನೆ: ಸರ್ಕಾರಕ್ಕೆ ರಾಮಲಿಂಗಾರೆಡ್ಡಿ ಸವಾಲ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳಿಂದಾಗಿ ಅಪಘಾತಗಳು ಹೆಚ್ಚಾಗಿದ್ದು, ಜನ ಸಾಯುತ್ತಿದ್ದಾರೆ, ಗಾಯಗೊಳ್ಳುತ್ತಿದ್ದಾರೆ. ನಗರದ ರಸ್ತೆ ಸ್ಥಿತಿ ಕಂಡು ಬಿಜೆಪಿಯ ಆಡಳಿತ ವೈಫಲ್ಯಕ್ಕೆ ಹೈಕೋರ್ಟ್ ಚೀಮಾರಿ ಹಾಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಇದ್ದಾಗಲೂ ರಸ್ತೆ ಗುಂಡಿ ಬೀಳುತ್ತಿದ್ದವು, ಆದರೆ ನಾವು ಆಗಿಂದಾಗ್ಗೆ ಗುಂಡಿಗಳನ್ನು ಮುಚ್ಚಿಸುತ್ತಿದ್ದೆವು. ಕಳೆದ ಎರಡೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರದಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಈಗ ಬೆಂಗಳೂರು ನಗರದಲ್ಲಿಯೇ 7 ಮಂದಿ ಸಚಿವರಿದ್ದಾರೆ. ಮುಖ್ಯಮಂತ್ರಿ ಬಳಿಯೇ ಬೆಂಗಳೂರು ನಗರ ಉಸ್ತುವಾರಿ ಖಾತೆ ಇದೆ. ನಾನು ಉಸ್ತುವಾರಿಯಾಗಿದ್ದಾಗ ವಾರಕ್ಕೆ 3 ಬಾರಿ ಸಿಟಿ ರೌಂಡ್ಸ್ ಮಾಡುತ್ತಿದ್ದೆ. ಆದರೆ ಇವರೇನು ಮಾಡುತ್ತಿದ್ದಾರೆ, ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಆಗಲಿಲ್ಲ. ನನಗೆ ಜವಾಬ್ದಾರಿ ಕೊಟ್ಟು ನೋಡಿ, ನಾನು ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದರು.

2019-20ನೇ ಸಾಲಿನಲ್ಲಿ ಬಿಬಿಎಂಪಿಯ 198 ವಾರ್ಡ್‌ಗಳಿಗೆ ನಯಾ ಪೈಸೆ ಅನುದಾನ ಕೊಟ್ಟಿಲ್ಲ. 2020-21ರಲ್ಲಿ ಪ್ರತಿ ವಾರ್ಡಿಗೆ ಘೋಷಿಸಿದ ₹60 ಲಕ್ಷ ಇನ್ನೂ ಬಿಡುಗಡೆ ಮಾಡಿಲ್ಲ. ಅನುದಾನ ನೀಡದೇ ರಸ್ತೆ ಗುಂಡಿ ಮುಚ್ಚಿ ಎಂದರೆ ಹೇಗೆ ಮುಚ್ಚಲು ಸಾಧ್ಯ? ಎಂದಿದ್ದಾರೆ.

ಇತ್ತೀಚೆಗೆ ಅತಿಯಾದ ಮಳೆ ಸುರಿದಾಗ ಬೆಂಗಳೂರಿನ ಸಚಿವರುಗಳು ತಮ್ಮ ಕ್ಷೇತ್ರ ಬಿಟ್ಟು ಹೊರಬರಲಿಲ್ಲ.ಮುಖ್ಯಮಂತ್ರಿಗಳು ಮಳೆ ಹಾನಿ ವೀಕ್ಷಣೆಗೆ ಹೋಗಿ, ನೆಪಮಾತ್ರಕ್ಕೆ ಸಿಟಿ ರೌಂಡ್ಸ್ ಮುಗಿಸುತ್ತಾರೆ. ಈ ರೀತಿ ಬೇಜವಾಬ್ದಾರಿಯಾಗಿ ನಡೆದುಕೊಂಡರೆ ಬೆಂಗಳೂರಿನ ರಸ್ತೆಗಳು ಗುಂಡಿ ಬೀಳದೇ ಇರುತ್ತವಾ? ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು