ಬೈಡನ್ ಯುಗಾರಂಭ; ಆತಂಕದ ನಡುವೆಯೂ ಕಣ್ಣರಳಿಸಿದ ನಿರೀಕ್ಷೆ…

baiden
Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಮೇರಿಕಾದಲ್ಲಿ ಟ್ರಂಪ್ ಯುಗ ಅಖೈರಾಗಿ ಕೊನೆಗೊಂಡಿದೆ. ಬೈಡನ್ ಸಂಸತ್ತು ಪ್ರವೇಶಿಸಿದ್ದಾರೆ. ಉದ್ದಟನೊಬ್ಬನ ಕಪಿಮುಷ್ಟಿಯಿಂದ ಅಮೇರಿಕಾ ಬಿಡುಗಡೆ ಪಡೆದಿದೆ. ಅಲ್ಲಿ ಸಣ್ಣ ನಿರೀಕ್ಷೆಯೊಂದು ಕಣ್ಣರಳಿಸಿದೆ. ಈ ನಿರೀಕ್ಷೆಗಳೆಲ್ಲಾ ಟ್ರಂಪ್ ಬಿತ್ತಿದ ಭೀತಿಯನ್ನು ಬೈಡನ್ ಮೆಟ್ಟಿನಿಲ್ಲುವ ವೈಖರಿ, ರಿವಾಜಿನ ಮೇಲೆ ಆಧರಿತಗೊಳ್ಳಲಿದೆ. ಜನಾಂಗೀಯತೆ, ವರ್ಣಭೇದ, ನವನಾಝಿ, ಸಮೇತ ಬಲಪಂಥೀಯತೆಯನ್ನು ಬೆಂಬಲಿಸುವ ಸರ್ವ ವರ್ಗಗಳನ್ನು ಕಳೆದ ನಾಲ್ಕು ವರ್ಷಗಳ ಟ್ರಂಪ್ ಆಡಳಿತ ಶಕ್ತಗೊಳಿಸಿತ್ತು. ಆಡಳಿತ ವರ್ಗದ ಪರ್ಯಾಯ ಶಕ್ತಿಯಾಗಿ ಈ ವರ್ಗ ಬೆಳೆದದ್ದೂ ಇದೇ ನಾಲ್ಕು ವರ್ಷಗಳಲ್ಲಿ. ಜಗತ್ತಿನಾದ್ಯಂತ ಇರುವ ಬಲಪಂಥೀಯ ವರ್ಗಕ್ಕೆ ಟ್ರಂಪ್ ಆದರ್ಶ ಪ್ರಾಯನಾದ. ಅಮೇರಿಕಾದ ಪೋಲೀಸ್ ಇಲಾಖೆಯಲ್ಲೂ ಇಷ್ಟೊಂದು ತೀವ್ರವಾಗಿ ವರ್ಣಬೇಧ ಈ ಮೊದಲು ಹಾಸುಹೊಕ್ಕಾಗಿರಲಿಲ್ಲ‌. ಜಾರ್ಜ್ ಫ್ಲಾಯ್ಡ್‌ ಸಮೇತ ಅನೇಕ ಕರಿಯರು ಪೋಲೀಸರ ವರ್ಣಬೇಧದ ಕ್ರೌರ್ಯಕ್ಕೆ ಬಲಿಯಾದರು. ಈ ವರ್ಣಬೇಧ ನೀತಿಯ ವಿರುದ್ಧ ಆಫ್ರೋ ಏಶ್ಯನ್ ವಂಶಜರು ಬ್ಲಾಕ್ ಲೈವ್ಸ್ ಮಾಟರ್ ಎಂಬ ಹೆಸರಲ್ಲಿ ಸಿಡಿದೆದ್ದರು. ಹೀಗೆ ಭುಗಿಲೆದ್ದ ಜನಾಕ್ರೋಶಕ್ಕೆ ಜಗತ್ತಿನಾದ್ಯಂತ ಭಾರೀ ಬೆಂಬಲ ವ್ಯಕ್ತವಾದವು. ಇದು ಟ್ರಂಪ್‌ನ ಗುಂಡಿಗೆ ಉಡುಗಿಸಿತು. ತನ್ನ ವಿರುದ್ದವೇ ಮಾತಾಡಿದ್ದ ಕಮಲಾ ಹಾರಿಸ್‌ರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಿಲ್ಲಿಸಿದ್ದ ಬೈಡನ್ ಮೊದಲು ಒಂದಷ್ಟು ವಿಚಿಲಿತರಾಗಿದ್ದರು. ಆದರೆ ಕೊನೆಯ ಹಂತದಲ್ಲಿ ಅವರನ್ನು ಗೆಲುವಿನ ದಡಕ್ಕೆ ಮುಟ್ಟಿಸಿದ್ದು ಇದೇ ಜನಾಂದೋಲನ ಸೃಷ್ಟಿಸಿದ ಸಾಕ್ಷಿಪ್ರಜ್ಞೆಯಾಗಿತ್ತು. ಒಂದೆಡೆ ಬಲಪಂಥೀಯ ಶಕ್ತಿಗಳು ಸಂಘಟಿತಗೊಳ್ಳುತ್ತಿ ದ್ದಂತೆ ಮತ್ತೊಂದೆಡೆ ಕರಿಯರು, ವಲಸೆಗಾರರು ಮಾಲ್ಕಂ ಎಕ್ಸ್, ಮಾರ್ಟಿನ್ ಕಿಂಗ್‌ ಲೂಥರ್‌ರ ವಿಚಾರಧಾರೆಗ ಳೊಂದಿಗೆ ಜಾಗೃತಗೊಳ್ಳತೊಡಗಿದರು. ಇದೆಲ್ಲವೂ ಟ್ರಂಪ್‌ ಪ್ರಾಬಲ್ಯತೆ ಕುಸಿಯಲು, ಬೈಡನ್ ಮುನ್ನೆಲೆಗೆ ಬರಲು ಕಾರಣವಾಯಿತು. ಈ ಎಲ್ಲಾ ಕಾರಣಕ್ಕಾಗಿ ತನ್ನ ಮೇಲೆ ಅಮೇರಿಕಾದ ಜನತೆ ಇಟ್ಟ ಭರವಸೆ, ನಿರೀಕ್ಷೆಯನ್ನು ಈಡೇರಿಸುವ ಹೊಣೆ‌‌‌ ಸದ್ಯಕ್ಕೆ ಬೈಡನ್ ಮೇಲಿದೆ. ಹಾಗೆ ನೋಡುವುದಾದರೆ ಗೆಲುವು ಖಚಿತವಾಗುತ್ತಿದ್ದಂತೆ ಬೈಡನ್ ನೀಡಿದ ಹೇಳಿಕೆಗಳು, ಪ್ರಮಾಣ ವಚನದ ವೇಳೆ ಕೊಟ್ಟ ಭರವಸೆ ಹಾಗೂ ಆ ಬಳಿಕ ಇಟ್ಟ ಹೆಜ್ಜೆಗಳೆಲ್ಲವೂ ಆಶಾದಾಯಕ ಎನ್ನಬಹುದು. ಅದರಲ್ಲೂ ಕ್ಯಾಪಿಟಲ್ ದಾಳಿಯ ವೇಳೆ ಬೈಡನ್ ಆಡಿದ ‘ಎಲ್ಲರನ್ನೂ ಒಟ್ಟು ಗೂಡಿಸುವ ಉಪಶಮನದ ಕೆಲಸ’ ಆಗಬೇಕಿದೆ ಎಂಬ ಮಾತು ಅಮೇರಿಕಾದ ಗಾಯಗಳಿಗೆ ಮರುಗುವ, ಸೂಕ್ಷ್ಮ ಸಂವೇದನೆಯಿರುವ ವೈದ್ಯನ ಮಾತಿನಂತೆ ಧ್ವನಿಸುತ್ತದೆ.

ಒಟ್ಟಿನಲ್ಲಿ ಬೈಡನ್ ಅಮೇರಿಕಾದ ಅತ್ಯಂತ ಕೆಟ್ಟ ಕಾಲದಲ್ಲಿ ಅಧ್ಯಕ್ಷರಾಗುತ್ತಿದ್ದಾರೆ. ಈಗ ಅವರ ಮುಂದಿರುವುದು ಸವಾಲು ಮತ್ತು ಸಂಕಷ್ಟ ಮಾತ್ರ. ಕಳೆದ ನಾಲ್ಕು ವರ್ಷಗಳಲ್ಲಿ ಟ್ರಂಪ್ ತೆಗೆದುಕೊಂಡ ಅಸಂಬದ್ಧ ನಿರ್ಧಾರಗಳು ಅಲ್ಲಿನ ಆರ್ಥಿಕ, ವೈಜ್ಞಾನಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಹಿನ್ನಡೆಯನ್ನುಂಟು ಮಾಡಿದೆ. ಜಾಗತಿಕ ವಿಚಾರಗಳಲ್ಲಿ ಟ್ರಂಪ್ ತೆಗೆದ ನಿರ್ಧಾರಗಳಲ್ಲಿ ಸಮಚಿತ್ತತೆಯ, ಸಮಗ್ರತೆಯ ಕೊರತೆಯಿತ್ತು. ಇದೆಲ್ಲವೂ ಅಮೇರಿಕಾದ ಅಸ್ಮಿತೆಗೆ ದೊಡ್ಡ ಪೆಟ್ಟು ನೀಡಿದ್ದವು.  ಕೋವಿಡ್ ಪಿಡುಗಿನ ಬಗ್ಗೆ ಟ್ರಂಪ್ ತಳೆದ ಅಸಡ್ಡೆ‌ ನಿಲುವಿಗೆ ಅಲ್ಲಿನ ಜನ ಅಪಾರ ಬೆಲೆ ತೆತ್ತರು. ಇತರ ದೇಶಗಳಂತೆ ಅಮೇರಿಕಾದ ಆರ್ಥಿಕತೆಗೂ ಕೋವಿಡ್ ಬಲವಾದ ಒಡೆತ ನೀಡಿತು. ನಿರುದ್ಯೋಗ ದಾಖಲೆ ಮುರಿಯಿತು. ಕರಿಯರ ವಿರುದ್ದ ಬಹುಸಂಖ್ಯಾತ ಬಿಳಿಯರನ್ನು ಎತ್ತಿಕಟ್ಟುವ ಮೂಲಕ ಟ್ರಂಪ್ ಮಾಡಿದ ಸಾಮಾಜಿಕ ವಿಭಜನೆ ಆ ದೇಶದಲ್ಲಿ ಒಣಗದ ವೃಣಗಳನ್ನುಂಟು ಮಾಡಿದವು. ಈ ಎಲ್ಲಾ ಅಪಸವ್ಯಗಳನ್ನೂ ಅಮೇರಿಕಾ ಮೆಟ್ಟಿನಿಲ್ಲಲು ಹವಣಿಸಿತ್ತು. ಅದರ ಫಲಿತಾಂಶವೆಂಬಂತೆ ಬೈಡನ್ ಚುನಾಯಿತರಾದರು. ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ತಾಸುಗಳಲ್ಲಿ ಟ್ರಂಪ್ ಕೈಗೊಂಡ ಹತ್ತಾರು ನಿರ್ಧಾರಗಳನ್ನು ಕಿತ್ತೆಸೆಯುವ 17 ಅಧ್ಯಕ್ಷೀಯ ಆದೇಶಗಳಿಗೆ ಬೈಡನ್ ಸಹಿ ಹಾಕಿದರು.

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವುದು, ಮುಸ್ಲಿಮರು ಬಹು ಸಂಖ್ಯಾತರಾಗಿರುವ ದೇಶಗಳ ಜನರಿಗೆ ವಲಸೆ ನಿಷೇಧ, ಇತರ ದೇಶಗಳ ಜನರ ವಲಸೆಗೆ ನಿರ್ಬಂಧ, ಪ್ಯಾರಿಸ್‌ ಒಪ್ಪಂದಕ್ಕೆ ನಕಾರ, ಪರಿಸರ ರಕ್ಷಣೆ ವಿಚಾರದಲ್ಲಿ ಅಸಹಿಷ್ಣುತೆಯಂತಹ ಟ್ರಂಪ್‌ನ ಆಂಶಿಕ, ಪೂರ್ವಾಗ್ರಹ ಪೀಡಿತ ನಿರ್ಧಾರಗಳನ್ನು ಬೈಡನ್‌ ರದ್ದು ಮಾಡಿದ್ದಾರೆ. ಬೈಡನ್‌‌ರ ಈ ನಡೆ ಅಮೇರಿಕಾದಲ್ಲಿ ನಿಜವಾದ ಪ್ರಜಾಸತ್ತಾತ್ಮಕ ಯುಗಾರಂಭದ ಮುನ್ಸೂಚನೆಯೆಂದೂ ಹೇಳಬಹುದು.

ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕಿನಲ್ಲಿ ಅಪಾರ ಅನುಭವ, ಏಳುಬೀಳು, ನೋವುಗಳನ್ನು ಕಂಡು-ಉಂಡವರು ಬೈಡನ್. ಬೈಡನ್ ಪಳಗಿದ್ದು ಡೆಮಾಕ್ರಟಿಕ್ ಪಕ್ಷದ ಗರಡಿಯಲ್ಲಿ. ಒಬಾಮ ಅಧ್ಯಕ್ಷರಾಗಿದ್ದಾಗ ಉಪಾಧ್ಯಕ್ಷರಾಗಿದ್ದರು ಬೈಡನ್. ವಯಸ್ಸಿನಲ್ಲಿ ಕಿರಿಯನಾಗಿದ್ದ, ವರ್ಣದಲ್ಲಿ ಕರಿಯನಾಗಿದ್ದ, ಅನುಭವದಲ್ಲಿ ಇನ್ನೂ ಎಳೆಯನಾಗಿದ್ದ ವ್ಯಕ್ತಿ ಅಧ್ಯಕ್ಷನಾಗಿ ಆಯ್ಕೆಯಾದಾಗಲೂ, ಒಬಾಮಾಗೆ ನೀಡಿದ ಸಹಕಾರ, ತುಂಬಿದ ಸ್ಥೈರ್ಯಗಳೆಲ್ಲಾ ಬೈಡನ್‌ರ ವಿಶಾಲ ಅಂತಕರಣಕ್ಕೊಂದು ಉದಾಹರಣೆಯಾಗಿದೆ.  ಡೆಮಾಕ್ರಟಿಕ್ ಪಕ್ಷದ ಉದಾರವಾದಿ ನೀತಿಯ ಬೆಳಕು ಮತ್ತು ರಾಜಕೀಯ ವರ್ಚಸ್ಸು, ಸುಧೀರ್ಘ ಅನುಭವ, ವೈಖರಿಗಳೆಲ್ಲಾ ಈಗ ಅವರ ಮುಂದಿರುವ ಸವಾಲುಗಳನ್ನು ನಿಭಾಯಿಸಲು ನೆರವಾಗಬಹುದೆಂಬ ನಿರೀಕ್ಷೆ ಅಷ್ಟೂ ಅಮೇರಿಕಾ ಜನತೆಯಲ್ಲಿದೆ. ಈ ನಿರೀಕ್ಷೆಯೇ ಅವರನ್ನು ಅಧ್ಯಕ್ಷ ಸ್ಥಾನದ ವರೆಗೆ ಕೊಂಡೊಯ್ದಿದೆ.

ಟ್ರಂಪ್ ತನ್ನ ಅಧಿಕಾರವಧಿಯಲ್ಲಿ ತೆಗೆದ ಅತ್ಯಂತ ದುಬಾರಿ ಮೊತ್ತದ ಯೋಜನೆಯೆಂದರೆ ವಲಸೆಗಾರರನ್ನು ತಡೆಯಲು ಮೆಕ್ಸಿಕೋದಲ್ಲಿ ಗಡಿಗೋಡೆ ನಿರ್ಮಿಸುವುದು. ವಲಸೆಗಾರರಿಗೆ ಆತ ವಿಧಿಸಿದ ನಿರ್ಭಂಧ ಆ ರಾಷ್ಟ್ರದ ಪ್ರಗತಿಯನ್ನೇ ಕುಂಠಿತಗೊಳಿಸಿದವು. ಕಾರಣ ಆ ರಾಷ್ಟ್ರದ ವಿಕಾಸ, ಬೆಳವಣಿಗೆ, ಮತ್ತು ಅದರ ವೈಭವದ ಹಿಂದಿರುವುದು ಶತಮಾನಗಳಿಂದ ಹರಿದು ಬರುತ್ತಿರುವ ವಲಸೆಗಾರರ ಶ್ರಮ ಮತ್ತು ಬೆವರಾಗಿದೆ. ಟ್ರಂಪ್‌ನ ಈ ಯೋಜನೆಯನ್ನು ಸ್ಥಗಿತಗೊಳಿಸಿ ಬೈಡನ್ ಆದೇಶ ಹೊರಡಿಸಿದರು. ಮೆಕ್ಸಿಕೋ ಗಡಿಗೋಡೆ ನಿರ್ಮಾಣಕ್ಕೆ ನಿರ್ಗಮನ ಅಧ್ಯಕ್ಷ ಮೀಸಲಿರಿಸಿದ್ದು ಬರೋಬ್ಬರಿ 10ಶತ ಕೋಟಿ ಡಾಲರ್. ಈ ಮೊತ್ತವನ್ನು ರಕ್ಷಣಾ ಇಲಾಖೆಯ ಖಾತೆಯಿಂದ ಹಿಂಪಡೆಯುವ ತುರ್ತು ಆದೇಶಕ್ಕೆ ಬೈಡನ್ ಈಗಾಗಲೇ ಸಹಿಹಾಕಿದ್ದಾರೆ. ಅಮೇರಿಕಾ-ಮೆಕ್ಸಿಕೋ ಗಡಿಯಲ್ಲಿ ನಿರ್ಮಿಸಲು ನಿರ್ಧರಿಸಿದ್ದ ಈ ಗಡಿ ಗೋಡೆ ನಿರ್ಮಾಣವು ಅಮೇರಿಕಾದ ಇತಿಹಾಸದಲ್ಲೇ ಅತ್ಯಂತ ದುಬಾರಿ ವೆಚ್ಚದ ಸರಕಾರಿ ಮೂಲ ಸೌಕರ್ಯ ಯೋಜನೆಯಾಗಿತ್ತು. ಆದರೆ ಅಮೇರಿಕಾದ ತೆರಿಗೆ ಪಾವತಿದಾರರ ಹಣ ಗಡಿಗೋಡೆಯಂಥ ಪುಕ್ಸಟ್ಟೆ ಯೋಜನೆಗೆ ಬಳಕೆಯಾಗಬಾರದೆಂದು ಹೇಳಿದ ಬೈಡನ್ ವಲಸಿಗರನ್ನು ಸ್ವಾಗತಿಸುವ ನೆಲವಾಗಿ ಅಮೇರಿಕಾವನ್ನು ಬದಲಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಇನ್ನು ವಿದೇಶಾಂಗ ನೀತಿಯ ಬಗ್ಗೆ ಹೇಳುವುದಾದರೆ ಭಾರತ-ಅಮೇರಿಕಾ ಬಾಂಧವ್ಯದಲ್ಲಿ ಹೆಚ್ಚಿನ ಪ್ರಕ್ರಿಯೆಗಳ ಬಗ್ಗೆ ಭರವಸೆ ಉಳಿದಿಲ್ಲ. ಭಾರತದೊಂದಿಗೆ ಬೈಡನ್ ತಟಸ್ಥ ನಿಲುವನ್ನು ತಳೆಯುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದೆ. ಇದಕ್ಕೆ ಪ್ರಮುಖ ಕಾರಣವೇ ಟ್ರಂಪ್‌ನೊಂದಿಗೆ ಭಾರತ ಸ್ಥಾಪಿಸಿಕೊಂಡಿದ್ದ ಅತಿರೇಕದ ಸಂಬಂಧ. ಒಬ್ಬ ಬಲಪಂಥೀಯನಾಗಿದ್ದ ಟ್ರಂಪ್ ಭಾರತೀಯ ಬಲಪಂಥ ವಲಯಕ್ಕೆ ಆಪ್ತನಾಗಿದ್ದ. ಹಲವು ವರ್ಷಗಳಿಂದ ಅಮೇರಿಕಾದೊಂದಿಗೆ ಅಲಿಪ್ತ ನೀತಿಯನ್ನು ಅನುಸರಿಸಿ ಬಂದಿದ್ದ ಭಾರತದ ವಿದೇಶಾಂಗ ನೀತಿಯನ್ನು ಟ್ರಂಪ್‌ನ ಓಲೈಕೆಗಾಗಿ ಮೋದಿ ಸರಕಾರ ಒತ್ತೆಯಿಟ್ಟಿತ್ತು. ಅಮೇರಿಕಾದ ಅಧ್ಯಕ್ಷ ಅಭ್ಯರ್ಥಿಯ ಪರವಾಗಿ ಮೋದಿ ಪ್ರಚಾರ ಮಾಡಿದ್ದು ಅಲ್ಲಿನ ವಿರೋಧ ಪಕ್ಷಗಳ ಕೆಂಗೆಣ್ಣಿಗೆ ಗುರಿಯಾಗಿತ್ತು. ಭಾರತ ಅಮೇರಿಕಾದ ಒಬ್ಬ ಪ್ರಚಾರ ಕಾರ್ಯಕರ್ತನಾಗಿ ಗುರುತಿಸಿಕೊಂಡು, ಸಣ್ಣತನ ಮೆರೆಯಿತು. ಸಂಘಪರಿವಾರ ಮತ್ತು ಬಿಜೆಪಿಯೊಂದಿಗೆ ನಂಟುಹೊಂದಿದ್ದ ಇಬ್ಬರು ಭಾರತೀಯ ಅಮೇರಿಕನ್‌ರನ್ನು ಬೈಡನ್ ತನ್ನ ಸಂಪುಟದಿಂದ ಹೊರಗಿಟ್ಟದ್ದೂ ಇದೇ ಕಾರಣಕ್ಕೆ. ಇನ್ನಷ್ಟು ಪರಿಣಾಮ ಮುಂದಿನ ಭಾರತ ಅಮೇರಿಕಾ ಸಂಬಂಧದ ಮೇಲೆ ಇದು ಬೀರಲಿದೆ.

ಇನ್ನು ಚೈನಾದೊಂದಿಗೆ ಪಾಕಿಸ್ತಾನ್ ಕೈಜೋಡಿಸುವುದನ್ನು ಅಮೇರಿಕಾ ಸದಾ ಹೆದರುತ್ತದೆ. ಆ ಕಾರಣಕ್ಕಾಗಿ  ಪಾಕ್ ಅಮೇರಿಕಾ ಸಂಬಂಧ ಇನ್ನಷ್ಟು ಗಾಢವಾಗಲಿದೆ‌. ಇರಾನ್‌ನೊಂದಿಗಿನ ಪರಮಾಣು ಒಪ್ಪಂದವನ್ನು ಪುನರಾರಂಭಿಸುವ, ಪ್ರಸ್ತುತದಲ್ಲಿ ಹೇರಲಾಗಿರುವ ನಿರ್ಬಂಧವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಈಗಾಗಲೇ ಬೈಡನ್ ಕೈಗೊಂಡಿದ್ದಾರೆ. ಇಂಥದ್ದೊಂದು ಪ್ರಕ್ರಿಯೆ ನಡೆದೇ ಬಿಟ್ಟರೆ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ಭಾರತದ ಕನಸು ಈಡೇರುವ ಕಾಲ ಹತ್ತಿರದಲ್ಲಿದೆ ಅನ್ನಬಹುದು. ಮಧ್ಯಪ್ರಾಚ್ಯ, ಅದರಲ್ಲೂ ವಿಶೇಷವಾಗಿ ಫೆಲೆಸ್ತೀನ್ ಬಿಕ್ಕಟ್ಟಿನ ವಿಚಾರದಲ್ಲಿ ಬೈಡನ್ ತೆಗೆದುಕೊಳ್ಳಲಿರುವ ನಿರ್ಧಾರಗಳ ಮೇಲೆ ಇಡೀ ಜಗತ್ತಿನ ಕುತೂಹಲ ಕೇಂದ್ರೀಕರಿಸಿದೆ. ಇಸ್ರೇಲ್‌ನ ದಮನಕಾರಿ ನೀತಿಗೆ ಸದಾ ಬೆಂಬಲ ನೀಡಿದ್ದ ಟ್ರಂಪ್‌ನಿಂದ ಬೈಡನ್ ಎಷ್ಟರ ಮಟ್ಟಿಗೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬುದು ಕಾದು ನೋಡಬೇಕಾದ ಸಂಗತಿ.

ಒಟ್ಟಿನಲ್ಲಿ ಅತ್ಯಂತ ತಲ್ಲಣದ ಸಮಯಕ್ಕೆ ಬೈಡನ್ ಭರವಸೆಯಾಗಿದ್ದಾರೆ. ದಟ್ಟವಾದ ಭೀತಿಯನ್ನು ಒಂದಷ್ಟು ನಿರೀಕ್ಷೆಗಳ ಮೂಲಕ ತಿಳಿಗೊಳಿಸಿದ್ದಾರೆ. ಅಮೇರಿಕಾ ಸಮೇತ ಶಾಂತಿಯನ್ನು ಬಯಸುವ ಜಾಗತಿಕ ಜನತೆಯ ನೆಮ್ಮದಿಯ ನಿಟ್ಟುಸಿರಿಗೆ ಕಾರಣ ವಾಗಿದ್ದಾರೆ. ಈ ನಿರೀಕ್ಷೆ, ಭರವಸೆ, ನಂಬಿಕೆಗಳೆಲ್ಲಾ ಹುಸಿಯಾಗದಿರಲೆಂದು ಹಾರೈಸೋಣ..

~ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು