ಲಕ್ನೋ(10/10/2020): ಉತ್ತರ ಪ್ರದೇಶದಲ್ಲಿ ಸಮುದಾಯಗಳ ನಡುವೆ ಗಲಭೆಯನ್ನುಂಟು ಮಾಡಲು ಕೆಲವು ಗುಂಪುಗಳಿಗೆ ಹಣಕಾಸಿನ ನೆರವು ದೊರೆತಿದೆ ಎಂಬ ಆರೋಪವನ್ನು ಸಾಬೀತುಪಡಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಿಗೆ ಭೀಮ್ ಆರ್ಮಿ ಮುಖಂಡ ಚಂದ್ರ ಶೇಖರ್ ಆಜಾದ್ ಸವಾಲು ಹಾಕಿದ್ದಾರೆ. ಹತ್ರಸ್ ಘಟನೆಯ ಹಿನ್ನೆಲೆಯಲ್ಲಿ ನಡೆದ ಸಂಘರ್ಷಗಳಿಗಾಗಿ ನೂರು ಕೋಟಿ ರೂಪಾಯಿಗಳ ನೆರವು ಬಂದಿರುವುದಾಗಿ ಯೋಗಿ ಆರೋಪಿಸಿದ್ದರು.
“ಎಲ್ಲಾ ರೀತಿಯ ವಿಚಾರಣೆ ಬೇಕಾದರೂ ನಡೆಸಿ ನೋಡಿ. ನೂರು ಕೋಟಿ ಪಕ್ಕಕ್ಕಿಡಿ. ಬರೇ ಒಂದು ಲಕ್ಷ ರೂಪಾಯಿಗಳು ನನ್ನಲ್ಲಿದೆಯೆಂದು ನೀವು ತೋರಿಸಿಕೊಟ್ಟರೆ, ನಾನು ರಾಜಕೀಯಕ್ಕೆ ವಿರಾಮ ಹಾಕುತ್ತೇನೆ. ಇಲ್ಲದಿದ್ದರೆ ನೀವು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಡಿ. ನನ್ನ ಜೀವನವು ನನ್ನ ಸಮಾಜಕ್ಕಾಗಿ ಸಮರ್ಪಿಸಿದ್ದೇನೆ. ನನ್ನ ಸಮಾಜವೇ ನನ್ನ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿದೆ” ಎಂದು ಅಜಾದ್ ಟ್ವೀಟ್ ಮಾಡಿದರು.
ಹತ್ರಸ್ ಘಟನೆಯ ಬಳಿಕ ಅನ್ಯಾಯಕ್ಕೊಳಗಾದ ಬಾಲಕಿಗೆ ನ್ಯಾಯ ಕೊಡಬೇಕೆಂದು ಹೇಳಿ ಪ್ರತಿಭಟಿಸಿದ್ದರು. ಬಾಲಕಿಯ ಕುಟುಂಬಕ್ಕೆ ವೈ ಕೆಟಗರಿ ಭದ್ರತೆಯನ್ನು ಕೊಡಬೇಕೆಂದೂ ಅವರು ಆಗ್ರಹಿಸಿದ್ದರು