ಬೆಂಗಳೂರು(08/10/2020): ಗೂಗಲ್ ಪೇ ಮೂಲಕ ತನ್ನ ಖಾತೆಗೆ ಬಂದು ಬಿದ್ದ ಸಾವಿರಾರು ರುಪಾಯಿಯನ್ನು ಮರಳಿಸಿ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.
ಕೆ.ಆರ್. ಪುರಂ, ಹೂಡಿ ಆಸುಪಾಸಿನಲ್ಲಿ ಆಟೋ ಓಡಿಸಿ ಜೀವನದ ಬಂಡಿ ದೂಡುತ್ತಿರುವ ಹರೀಶ್ ಎಂಬವರೇ ಹಣ ಮರಳಿಸಿ ಪ್ರಾಮಾಣಿಕತೆ ಮೆರೆದವರು.
ಮಂಗಳೂರು ಮೂಲದ ಸತ್ತಾರ್ ಎಂಬ ಯುವಕ ಗೆಳೆಯನ ಅಂಗಡಿಗೆ ಫರ್ನೀಚರ್ ಮಾಡಿಸಲು ಹಾರ್ಡ್ವೇರ್ ಸಾಮಾಗ್ರಿಗಳನ್ನು ಹರೀಸ್ ರ ಆಟೋದಲ್ಲಿ ಸಾಗಿಸಿ, ಗೂಗಲ್ ಪೇ ಮೂಲಕ ಬಾಡಿಗೆ ನೀಡಿದ್ದರು. ಬಳಿಕ ಹರೀಸ್ ಅಲ್ಲಿಂದ ತೆರಳಿದ್ದರು.
ಆದರೆ, ನಂತರ ಸತ್ತಾರ್ ತಪ್ಪಾಗಿ 35,000 ಸಾವಿರ ರೂಪಾಯಿಗಳನ್ನು ಹರೀಸ್ ರ ಅಕೌಂಟ್ಗೆ ಕಳುಹಿಸಿಬಿಟ್ಟಿದ್ದಾರೆ. ಯಾರಿಗೋ ಕಳುಹಿಸಬೇಕಾದ ಹಣವನ್ನು ಆಟೋ ಚಾಲಕನ ಅಕೌಂಟ್ಗೆ ಕಳುಹಿಸಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು ಸತ್ತಾರ್. ನಂತರ ಗೂಗಲ್ ಪೇ ಮೂಲಕ ಅವರ ನಂಬರ್ ಪಡೆದು ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾರೆ.
ತಕ್ಷಣವೇ ಚಾಲಕ ಹರೀಶ್ ಸ್ಪಂದಿಸಿ, ಹಣ ವಾಪಾಸ್ ಕಳುಹಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಘಟನೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸತ್ತಾರ್ ವಿವರಿಸಿದ್ದು ಹೀಗೆ ’ ಮೂವತ್ತೈದು ರುಪಾಯಿ ಕೂಡ ಮುಖ್ಯವಾಗುವ ಈ ಸಮಯದಲ್ಲಿ,ಕಣ್ತಪ್ಪಿನಿಂದ ಕ್ಷಣ ಮಾತ್ರದಲ್ಲಿ ಮೂವತ್ತೈದು ಸಾವಿರ ರುಪಾಯಿ ಹರೀಶ್ ಅಕೌಂಟಿಗೆ ಹೋಗಿತ್ತು. ಒಂದು ಕ್ಷಣ ಆಕಾಶ ತಲೆ ಮೇಲೆ ಬಿದ್ದಂತೆ ಭಾಸವಾಗಿತ್ತು. ಆದರೆ ಕರೆ ಮಾಡಿದ ತಕ್ಷಣ ಹರೀಶ್ ಹಣವನ್ನು ಹಿಂತಿರುಗಿಸಿದ್ದಾರೆ’ ಎಂದು ಧನ್ಯವಾದ ತಿಳಿಸಿದ್ದಾರೆ.