ಉಡುಪಿ(14/10/2020): ಉಡುಪಿಯ ಜಯ ಶೆಟ್ಟಿಯೆಂಬವರ ರಿಕ್ಷಾದಲ್ಲಿ ಮಹಿಳೆಯೊಬ್ಬರು ಮರೆತು 50 ಸಾವಿರ ರೂಪಾಯಿಯನ್ನು ಬಿಟ್ಟು ಹೋಗಿದ್ದು, ತಕ್ಷಣವೇ ಮಹಿಳೆಯನ್ನು ಸಂರ್ಪಕಿಸಿದ ಜಯಶೆಟ್ಟಿಯವರು ಹಣವನ್ನು ಹಿಂದಿರುಗಿಸುವ ಮೂಲಕ ಮಾದರಿಯಾಗಿದ್ದಾರೆ. ಜಯ ಶೆಟ್ಟಿಯವರ ಮಾನವೀಯ ನಡೆ ಊರವರ ಪ್ರಶಂಸೆಗೆ ಕಾರಣವಾಗಿದೆ.
ಇಂದು ಬೆಳಿಗ್ಗೆ ಕುರ್ಕಾಲಿನಿಂದ ಮಹಿಳೆಯೊಬ್ಬರು ಆಟೋರಿಕ್ಷಾದಲ್ಲಿ ಕಟಪಾಡಿ ಪೇಟೆಗೆ ಬಂದಿದ್ದು, ರಿಕ್ಷಾದಿಂದ ಇಳಿಯುವಾಗ ಗಡಿಬಿಡಿಯಲ್ಲಿ 50ಸಾವಿರ ರೂಪಾಯಿ ಹಣವನ್ನು ಮರೆತು ರಿಕ್ಷಾದಲ್ಲೇ ಬಿಟ್ಟುಹೋಗಿದ್ದರು.
ಮಹಿಳೆಯನ್ನು ಬಸ್ಸ್ಟ್ಯಾಂಡಿನಲ್ಲಿ ಬಿಟ್ಟು ಉಡುಪಿಯ ಕಾರ್ತಿಕ್ ಎಸ್ಟೇಟ್ ಸಮೀಪದ ಆಟೋ ಸ್ಟ್ಯಾಂಡಿಗೆ ಮರಳಿದ್ದ ರಿಕ್ಷಾ ಚಾಲಕ ಜಯ ಶೆಟ್ಟಿ ಎಂಬವರು ಸೀಟ್ನಲ್ಲಿ ಪ್ಲಾಸ್ಟಿಕ್ ಇರುವುದನ್ನು ಗಮನಿಸಿದ್ದಾರೆ. ಏನೆಂದು ತೆರೆದಾಗ ಅದರಲ್ಲಿ 50ಸಾವಿರ ಹಣವಿದ್ದದ್ದು ಪತ್ತೆಯಾಗಿದೆ. ಆ ಕೂಡಲೇ ಉಡುಪಿಯಿಂದ ಕಟಪಾಡಿಗೆ ಬಂದು ಕುರ್ಕಾಲಿನ ಮಹಿಳೆಯನ್ನು ಸಂಪರ್ಕಿಸಿದ ಜಯ ಶೆಟ್ಟಿಯವರು 50ಸಾವಿರ ರೂಪಾಯಿ ಹಣವನ್ನು ಮರಳಿಸುವ ಮೂಲಕ ಮಾನವೀಯತೆ ಮೆರೆದರು.