ಪುಲ್ವಮಾ ದಾಳಿಗೆ 2 ವರ್ಷ…ಇನ್ನೂಉತ್ತರ ಸಿಗದ ಪ್ರಶ್ನೆಗಳು..

ಕಳೆದ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಪುಲ್ವಮಾ ದಾಳಿ ನಡೆಯಿತು. ಬಿಜೆಪಿ ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ ಸೈನಿಕರನ್ನು ಮತ್ತು ಸೇನೆಯ ಬಗ್ಗೆ ಉಲ್ಲೇಖಿಸಿತು. ಬಿಜೆಪಿ ಪರ ಪತ್ರಕರ್ತ ಅರ್ನಬ್ ಗೋಸ್ವಾಮಿ ಪುಲ್ವಮಾ ದಾಳಿಯನ್ನು ಸಂಭ್ರಮಿಸಿ ಸುದ್ದಿಯನ್ನು ಬಿತ್ತರಿಸಿದ. ಟಿಆರ್ ಪಿಯ ಓಟದಲ್ಲಿ ಸಾವನ್ನೂ ಸಂಭ್ರಮಿಸಿದ. ತನ್ನ ಟಿಆರ್ ಪಿಯನ್ನು ಹೆಚ್ಚಿಸಿದ. ಇವೆಲ್ಲಾ ನೆನಪುಗಳು ಜೀವಂತವಿರುವಾಗ  ಪುಲ್ವಾಮಾ ದಾಳಿಯಿಂದ ಹೆಚ್ಚು ಲಾಭ ಮಾಡಿಕೊಂಡಿದ್ದು ಯಾರು? ಎನ್ನುವ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿಲ್ಲ.

ಇನ್ನು ಪುಲ್ವಮಾ ದಾಳಿ ಕುರಿತ ತನಿಖೆಯ ವರದಿ ಏನಾಯಿತು? ದಾಳಿಗೆ ಕಾರಣವಾದ ಭದ್ರತಾ ಲೋಪಗಳಿಗೆ ಯಾರು ಹೊಣೆ? ಎನ್ನುವ ಪ್ರಶ್ನೆ ಮಾತ್ರ ಮೌನ ಉತ್ತರವನ್ನು ನೀಡಿದೆ. 2019ರ ಫೆ.14ನ್ನು  ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಹೌದು ಈ ದಿನ ಭಾರತದ ಪಾಲಿಗೆ ಕರಾಳ. 40 ಯೋಧರು ಪುಲ್ವಮಾದ ಅವಾಂತಿಪೋರ ಎಂಬಲ್ಲಿ ನಡುರಸ್ತೆಯಲ್ಲಿ ಛಿದ್ರವಾಗಿದ್ದರು. ಘಟನೆ ನಡೆದು 2 ವರ್ಷಗಳು ಕಳೆದಿದೆ. ಆದರೆ ಭಾರತದ ಮುಂದೆ ಈ ಭೀಭತ್ಸಕರಾಳತೆಯ ಚಿತ್ರಣ ಮಾತ್ರ ಮಾಸಿ ಹೋಗಲು ಸಾಧ್ಯವೇ?

ಪುಲ್ವಮಾ ದಾಳಿ ಮತ್ತು ಆ ಬಳಿಕ ದೇಶದ ಭದ್ರತೆ ಮತ್ತು ಭದ್ರತೆಯ ಕುರಿತಂತೆ ಸರಕಾರ ತೆಗೆದುಕೊಂಡ ಕ್ರಮಗಳು, ಗುಪ್ತಚರ ವೈಫಲ್ಯಗಳು ಬಗ್ಗೆ ಪ್ರಶ್ನೆಗಳು ಉದ್ಭವಿಸಿದೆ.  ಫೆ.14ರಂದು ಮಧ್ಯಾಹ್ನ 3ಗಂಟೆಯ ವೇಳೆಗೆ 350 ಕಿಲೋಗ್ರಾಂಗಳಷ್ಟು ಗ್ರೆನೇಡ್ ಸ್ಫೋಟಕಗಳನ್ನು ಹೊತ್ತ ಉಗ್ರರ ವಾಹನವು ಜಮ್ಮು-ಶ್ರೀನಗರ ಹೆದ್ದಾರಿಯ ಪುಲ್ವಮಾಕ್ಕೆ ಬಂದಿದೆ. ಇದು ಹೇಗೆ ಬಂತು? ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳು ಹೇಗೆ ತಲುಪಿದವು? ಗಡಿಯುದ್ದಕ್ಕೂ ಸ್ಫೋಟಕಗಳನ್ನು ಆಂತರಿಕವಾಗಿ ಸಂಗ್ರಹಿಸಲಾಗಿದೆಯೇ? ಸ್ಫೋಟಕ ವಸ್ತುಗಳ ಸಾಗಾಟ, ಸಂಗ್ರಹ ತಡೆಯಲು ಭದ್ರತಾ ಪಡೆಗಳು ಯಾಕೆ ವಿಫಲವಾಗಿದೆ? ಇಂತಹ ಗಂಭೀರ ಪ್ರಶ್ನೆಗಳು ಕಣ್ಣ ಮುಂದಿವೆ.

ಈ ಬೀಭತ್ಸ್ ಕೃತ್ಯವನ್ನು ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಎಂ) ಉಗ್ರ ಸಂಘಟನೆ ನಡೆಸಿದೆ ಎನ್ನಲಾಗಿದೆ. ಆದರೆ ಕೃತ್ಯಕ್ಕೆ  ಉಗ್ರ ಸಂಘಟನೆ ಬಳಸಿದ್ದು ಸ್ಥಳೀಯ ಕಾಶ್ಮೀರಿ ಮೂಲದ ಮೀಸೆ ಚಿಗುರಿದ 22 ವರ್ಷದ ಯುವಕನನ್ನು. ಈ ಉಗ್ರ ಸಂಘಟನೆ ಇಷ್ಟೊಂದು ಯಶಸ್ವಿಯಾಗಿ ಭಾರತದಲ್ಲಿ ಕಾರ್ಯತಂತ್ರ ರೂಪಿಸಲು ಹೇಗೆ ಸಾಧ್ಯವಾಯಿತು?

ಉಗ್ರರು ಕಾಶ್ಮೀರದಲ್ಲಿ ತಮ್ಮ ಚಟುವಟಿಕೆಗಳನ್ನು ಮಾಡಲು, ಕಾಶ್ಮೀರಿಗಳನ್ನು ಉಗ್ರ ಸಂಘಟನೆಗಳಲ್ಲಿ ನೇಮಕ ಮಾಡಲು ಹೇಗೆ ಸಾಧ್ಯವಾಯಿತು? ಇಂತಹ ಭಯೋತ್ಪಾದಕರ ಒಳನುಸುಳುಕೆಯನ್ನು ನಿಯಂತ್ರಣ ರೇಖೆಯಲ್ಲಿ ಯಾಕೆ ತಡೆಯಲಾಗಿಲ್ಲ?

ಜಮ್ಮು-ಶ್ರೀನಗರ ಹೆದ್ದಾರಿ ರಾಜ್ಯದ ಎರಡು ಪ್ರದೇಶಗಳ ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಎರಡು ವಿಭಿನ್ನ ಪ್ರದೇಶಗಳನ್ನು ಸಂಪರ್ಕಿಸುವ ಸೈನ್ಯವನ್ನು ಸಜ್ಜುಗೊಳಿಸಲು ಇದು ಹೆಚ್ಚು ಬಳಕೆಯಾದ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಹಲವಾರು ದಾಳಿಗಳು ನಡೆದಿವೆ. ಸೈನ್ಯದ ಸಂಚಾರಕ್ಕೆ ಈ ಹೆದ್ದಾರಿ ಸುರಕ್ಷಿತವಾಗಿದೆಯೇ? 2016 ರಿಂದ ಹೆದ್ದಾರಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ದಾಳಿಯಿಂದ ಯಾವುದೇ ಪಾಠವನ್ನು ಕಲಿತಿಲ್ಲವೇ? ಹೆದ್ದಾರಿ ಸುರಕ್ಷಿತವಲ್ಲ ಎಂದ ಮೇಲೆ ಯಾಕೆ 2500ಕ್ಕೂ ಅಧಿಕ  ಯೋಧರನ್ನು ಇದೇ ಮಾರ್ಗದಲ್ಲಿ 78 ವಾಹನಗಳಲ್ಲಿ ಸಂಚಾರಕ್ಕೆ ಅನುಮತಿಸಲಾಗಿದೆ. ಉಗ್ರಗಾಮಿತ್ವವು ವಿಪರೀತವಾಗಿರುವ ಮತ್ತು ಪ್ರತ್ಯೇಕತಾವಾದಿಗಳು ಸಮೃದ್ಧವಾಗಿರುವ ವಲಯದಲ್ಲಿ, ಭದ್ರತಾ ಪಡೆಗಳನ್ನು ಸ್ಥಳಾಂತರಿಸುವಾಗ ನಾಗರಿಕ ವಾಹನಗಳ ಸಂಚಾರವನ್ನು ಏಕೆ ಅನುಮತಿಸಬೇಕು? ದೇಶದ ಅನೇಕ ಭಾಗಗಳಲ್ಲಿ ವಿಐಪಿ ರಾಜಕಾರಣಿಗಳು ತೆರಳುವಾಗ ನಿರ್ಬಂಧ ವಿಧಿಸಲಾಗುತ್ತದೆ. ಆದರೆ ಸೈನಿಕರ ಸಂಚಾರದ ವೇಳೆ ಯಾಕೆ ನಿರ್ಬಂಧ ವಿಧಿಸಿಲ್ಲ ಎನ್ನುವ ಉತ್ತರವಿಲ್ಲದ ಪ್ರಶ್ನೆಗಳು ಸೈನಿಕರ ಸಾವಿನ ಬೆನ್ನಲ್ಲೇ ಉದ್ಭವಿಸಿದೆ.

ನಾವು ಸೈನಿಕರನ್ನು ಮೃತಪಟ್ಟಾಗ  “ಹುತಾತ್ಮರು” ಮತ್ತು “ಧೈರ್ಯಶಾಲಿಗಳಾಗಿ” ಪ್ರಶಂಸಿಸುವುದು ಸಾಮಾನ್ಯವಾಗಿದೆ, ಆದರೆ ತಜ್ ಬಹದ್ದೂರ್ ಎಂಬ ಜವಾನ್ ಇತ್ತೀಚೆಗೆ ರ ಸೈನಿಕರ ಆಹಾರ ಕಳಪೆ ಇದೆ ಎಂದು ಹೇಳಿದಾಗ, ಅವರಿಗೆ ಎಷ್ಟು ಬೆಂಬಲ ಸಿಕ್ಕಿತು? ಪುಲ್ವಮಾದಲ್ಲಿ ಮೃತಪಟ್ಟ ಯೋಧರ ಕುಟುಂಬಕ್ಕೆ ಕೊಟ್ಟ ಭರವಸೆಗಳು ಏನಾಯ್ತು ಎಂಬುವುದನ್ನು ಅವಲೋಕಿಸಿದಾಗ ಸರಕಾರಕ್ಕೆ ಸೈನಿಕರ ಮೇಲಿರುವ ಬದ್ಧತೆ ಬಹಿರಂಗವಾಗುತ್ತದೆ.

ಪುಲ್ವಮಾ ದಾಳಿಯ 14 ದಿನಗಳ ನಂತರ, ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಕೋಟ್ನಲ್ಲಿ ನಿಯಂತ್ರಣ ರೇಖೆಯಾದ್ಯಂತ ವೈಮಾನಿಕ ದಾಳಿ ನಡೆಸಿ, ಜೈಶ್-ಎ-ಮೊಹಮ್ಮದ್ ಸಂಘಟನೆಯ ತರಬೇತಿ ಶಿಬಿರಗಳನ್ನು ನಾಶಪಡಿಸಿದೆ. 300-350 ಭಯೋತ್ಪಾದಕರನ್ನು  ಹತ್ಯೆ ಮಾಡಿದೆ ಎಂದು ಭಾರತದ ಮಾದ್ಯಮಗಳು ವರದಿ ಮಾಡಿತ್ತು. ಆದರೆ ಇದನ್ನು ಪಾಕಿಸ್ತಾನ ನಿರಾಕರಿಸಿದೆ. ಮತ್ತು ಯಾವುದೇ ದಾಖಲೆಗಳು ಕೂಡ ಈ ಬಗ್ಗೆ ಬಿಡುಗಡೆಯಾಗಿಲ್ಲ. ಈ ರೀತಿ ಸಂಶಯದ ವಾತಾವರಣ ಯಾಕೆ ನಿರ್ಮಾಣವಾಯಿತು? ಯೋಧ ಕುಟುಂಬಸ್ಥರ ಆತ್ಮಸ್ತೈರ್ಯವನ್ನು ಯಾಕೆ ಕುಗ್ಗಿಸಲಾಗಿದೆ ಎಂಬ ಪ್ರಶ್ನೆ ಮೂಡಿದೆ.

ಪುಲ್ವಮಾ ದಾಳಿ ಬಳಿಕ ಸಿಆರ್‌ಪಿಎಫ್ ಆಂತರಿಕ ವರದಿಯು ಭಾರೀ ಗುಪ್ತಚರ ವೈಫಲ್ಯದ ಬಗ್ಗೆ ಹೇಳಿದೆ. ಆದರೆ ಸರಕಾರ ಇದನ್ನು ತಿರಸ್ಕರಿಸಿದೆ. ಆಂತರಿಕ ವರದಿಯು ಸಿಆರ್‌ಪಿಎಫ್‌ನ ನಿರ್ಣಾಯಕ ಲೋಪಗಳನ್ನು ಎತ್ತಿ ತೋರಿಸಿದೆ, ಆದರೆ ಈ ಬಗೆಗಿನ ಲೋಪದೋಷಕ್ಕೆ ಕಾರಣ ಕರ್ತರಾದವರನ್ನು ಯಾಕೆ ಶಿಕ್ಷಿಸಿಲ್ಲ? ದುರಂತ ನಡೆದು ಎರಡು ವರ್ಷ ಕಳೆದರೂ ಪುಲ್ವಮಾ ದಾಳಿ ಕುರಿತು ಭುಗಿಲೆದ್ದ ಪ್ರಶ್ನೆಗಳು ಯಾಕೆ ಮೌನವಾಗಿದೆ ಎನ್ನುವುದನ್ನು ಪುಲ್ವಮಾ ದಲ್ಲಿ ಮೃತಪಟ್ಟ ಧೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಾ ನಾವು ಅವಲೋಕಿಸಬೇಕಿದೆ.