ಹಿಟ್ಲರ್ ಕ್ರಮಗಳಿಗೆ ಸಾಮ್ಯತೆ| ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಪಕ್ಷಪಾತೀಯ ಕ್ರಮ….

ಪಕ್ಷಪಾತೀಯ ಧೋರಣೆ “ಪ್ರಜಾಪ್ರಭುತ್ವ ದೇಶ” ಮತ್ತು ಅದರ ಆಶಯಕ್ಕೆ ವಿರುದ್ಧವಾದುದು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ  ಗುಂಪು ಹತ್ಯೆ, ಅಲ್ಪಸಂಖ್ಯಾತರ, ದಲಿತರ ಮೇಲೆ ನಡೆಯುತ್ತಿರುವ ಶೋಷಣೆ ಬಗ್ಗೆ ಜಾಗತಿಕವಾಗಿ ಚರ್ಚೆ ನಡೆಯುತ್ತಿದೆ. ಸರ್ವಾಧಿಕಾರಿ ನಡೆಗಳು, ಏಕಪಕ್ಷೀಯ ಕ್ರಮಗಳು, ವಿರೋಧಾಭಿಪ್ರಯಾಗಳ ಮೇಲೆ ಬಲ ಪ್ರಯೋಗ ಸಾಂವಿಧಾನಿಕ ವ್ಯವಸ್ಥೆಗೆ ಸವಾಲಾಗಿದೆ.

ನನ್ನ ನೋವನ್ನೇ ನಾನು ನ್ಯಾಯಾಲಯದ ಮುಂದೆ ಹೇಳಿ ಪರಿಹಾರ ಪಡೆಯಲಾಗದ ದುಸ್ಥಿತಿ ಇದೆ ಎಂದು ನಿವೃತ್ತ ಸಿಜೆಐ  ರಂಜನ್ ಗೊಗೊಯ್ ಇತ್ತೀಚೆಗೆ ಹೇಳಿಕೆಯನ್ನು ನೀಡಿದ್ದರು. ನ್ಯಾಯಾಂಗ ವ್ಯವಸ್ಥೆ ಅಸ್ತವ್ಯಸ್ಥವಾಗಿದೆ, ಕೊರತೆಗಳ ಮಧ್ಯೆ ಕಮರಿ ಹೋಗುತ್ತಿದೆ ಎನ್ನುವುದನ್ನು ಬಹಿರಂಗಪಡಿಸಿದ್ದರು. ಓರ್ವ ದೇಶದ ಪರಮೋಚ್ಚ ಮಾಜಿ ನ್ಯಾಯಮೂರ್ತಿ ನೀಡಿರುವ ಈ ಹೇಳಿಕೆ ಯಾವ ರೀತಿ ನ್ಯಾಯಾಂಗ ವ್ಯವಸ್ಥೆಯನ್ನು ಕಟ್ಟಿಹಾಕಲಾಗಿದೆ ಎನ್ನುವುದನ್ನು ಗಮನಿಸಬಹುದಾಗಿದೆ. ಗೊಗಯ್ ನಿವೃತ್ತಿಗೆ ಕೊನೆಯ ದಿನಗಳಲ್ಲಿ ಕೊಟ್ಟ ರಾಫೇಲ್ ಅಕ್ರಮಕ್ಕೆ ಸಂಬಂಧಿಸಿ ಮೋದಿ ಸರಕಾರಕ್ಕೆ ಕೊಟ್ಟ ಕ್ಲೀನ್ ಚಿಟ್, ಅಯೋಧ್ಯೆ ಭೂ ವಿವಾದ ತೀರ್ಪು,  ದೇಶದ ಗಮನ ಸೆಳೆದಿದ್ದ 2 ತೀರ್ಪುಗಳು. ತೀರ್ಪಿನ ಬಳಿಕ ಹೆಚ್ಚು ಚರ್ಚೆಯಾಗಿದೆ. ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನರು ಟೀಕೆ ಮಾಡುವಂತಾಗಿದೆ.

ಬಾಬರಿ ತೀರ್ಪಿನಲ್ಲಿ ರಾಮಮಂದಿರ ನಿರ್ಮೋಹಿ ಅಖಾಡ ಗೆದ್ದಿದೆಯಾ ಅಥವಾ ಮುಸ್ಲಿಂ ಅರ್ಜಿದಾರರು ಸೋತರೇ ಎನ್ನುವುದಕ್ಕಿಂತ ಭಾರತದ ಸಂವಿಧಾನದ ಆಶಯಕ್ಕೆ ಆದ ಧಕ್ಕೆ ಏನು ಎಂಬವುದನ್ನು ಅವಲೋಕಿಸಬೇಕಿದೆ. ಇವತ್ತು ಧರ್ಮದ ಆಧಾರದಲ್ಲಿ ಅಶಾಂತಿ, ದ್ವೇಷವನ್ನು ಸೃಷ್ಟಿಸಲಾಗುತ್ತದೆ. ಆದರೆ ಯಾವ ಧರ್ಮವೂ ಅಶಾಂತಿಯನ್ನು ಬೆಂಬಲಿಸುವುದಿಲ್ಲ. ಧರ್ಮ ಎಂದರೆ ಶಾಂತಿ, ಸಹೋದರತೆ. ಧರ್ಮ ಎಂಬ ಪದದ ವಾಸ್ತವ ಅರ್ಥ ನಿಷ್ಠೆ, ಬದ್ಧತೆ. ಇದು ದೇಶಗಳ ವಿಚಾರಕ್ಕೆ ಬಂದಾಗ ಆಯಾ ಸ್ಥಾನಗಳಲ್ಲಿರುವವರು ತಮ್ಮ ಸ್ಥಾನದಲ್ಲಿ ಮಾಡಿದ ಕೆಲಸದ ನಿಷ್ಠೆಯನ್ನು ಎತ್ತಿತೋರಿಸುತ್ತದೆ.

ಪ್ರಜೆಗಳು ಅಸಹಾಯಕರಾದರೆ ಸರ್ವಾಧಿಕಾರಿ ಮುನ್ನಲೆಗೆ ಬರುತ್ತಾನೆ. ಆರ್ಥಿಕ ಅಸ್ಥಿರತೆ, ಬೆಲೆಯೇರಿಕೆ ಜೊತೆಗೆ ಪೊಲೀಸ್, ನ್ಯಾಯಾಂಗ ಕಾನೂನು, ಆಡಳಿತ ವ್ಯವಸ್ಥೆ ಮೂಲಕ  ಜನರನ್ನು ಅಸಹಾಯಕರಾನ್ನಾಗಿ ಮಾಡಲಾಗುತ್ತದೆ. ಇದು ಸರ್ವಾಧಿಕಾರ. ಇಲ್ಲಿ ಪ್ರಜೆಗಳನ್ನು ಸಮಾಧಾನ ಮಾಡುವ ಕೆಲಸವನ್ನು ಬಲಾಡ್ಯನು ಮಾಡುತ್ತಾನೆ. ಇವು ಸಣ್ಣ ಪ್ರದೇಶಗಳ ಬಗ್ಗೆ ಹೇಳುವುದಾದರೆ ಗೂಂಡಾ ಎನ್ನಬಹುದು. ದೇಶಕ್ಕೆ ಸಂಬಂಧಿಸಿದರೆ ಅದು ಸರ್ವಾಧಿಕಾರವಾಗುತ್ತದೆ. ಆದರೆ ಸರ್ವಾಧಿಕಾರಿ ಜನರನ್ನು ಭ್ರಮೆಯಲ್ಲಿ ಬದುಕುವಂತೆ ಮಾಡುತ್ತಾನೆ. ಕೊನೆಗೆ ಡಾರ್ವಿನನ ಸಿದ್ದಾಂತದಂತೆ ಬಲವಿದ್ದರೆ ಬದುಕುತ್ತಾರೆ ಎನ್ನುವ ವಾತಾವರಣ ನಿರ್ಮಾಣವಾಗುತ್ತದೆ.

ಆರ್ಥಿಕ, ಸಮಾಜಿಕ ದುಸ್ಥಿತಿಗಳನ್ನು ಮರೆಮಾಚಲು ಅದನ್ನು ಬೆಂಬಲಿಸುವ ಸಂಘಟನೆ, ಗುಂಪುಗಳನ್ನು ನಿರ್ಮಿಸಲಾಗುತ್ತದೆ.  ಆ ಗುಂಪು-ಸಂಘಟನೆ ಸರ್ವಾಧಿಕಾರಿ ನಿಲುವನ್ನು ಪ್ರಶ್ನಿಸಿದವರ ಮೇಲೆ ದಬ್ಬಾಳಿಕೆ ಮಾಡುತ್ತದೆ. ಆಡಳಿತ ವ್ಯವಸ್ಥೆಗಳನ್ನು ಸರ್ವಾಧಿಕಾರಿ ಕಟ್ಟಿಹಾಕುತ್ತಾನೆ. ಸರಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗುತ್ತದೆ. ಅರಾಜಕತೆ ನಿರ್ಮಾಣವಾಗುತ್ತದೆ. ಕಾನೂನು, ಕಾಯ್ದೆಗಳ ದುರ್ಬಳಕೆ ನಡೆಯುತ್ತದೆ. ಪ್ರತಿಭಟನೆಯ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತದೆ. ನ್ಯಾಯದ ಹಂಚಿಕೆಯಲ್ಲಿ ಹಸ್ತಕ್ಷೇಪ ನಡೆಯುತ್ತದೆ. ಅಧಿಕಾರವನ್ನು ಕೇಂದ್ರೀಕರಿಸಲು ಜನರನ್ನು ದಿಕ್ಕು ತಪ್ಪಿಸುವ ಸಲುವಾಗಿ ಪರಸ್ಪರ ಎತ್ತಿಕಟ್ಟಲಾಗುತ್ತದೆ.ಇಂತಹ ವಾತಾವರಣ ನಿರ್ಮಾಣವಾದಲ್ಲಿ ಪ್ರಜಾಪ್ರಭುತ್ವ  ವ್ಯವಸ್ಥೆ ನಿಷ್ಕ್ರಿಯವಾಗಿರುತ್ತದೆ.

ಮೊದಲ ಮಹಾಯುದ್ದದ ಬಳಿಕ ಜರ್ಮನಿಯಲ್ಲಿ ನಾಜಿಗಳ ಸಿದ್ಧಾಂತವು ರಾಷ್ಟ್ರೀಯತೆ, ಜನಾಂಗೀಯ ಶ್ರೇಷ್ಠತೆ, ಪಕ್ಷಪಾತ ಸೇರಿ ಹಲವಾರು ಪ್ರಮುಖ ವಿಚಾರಗಳ ಮೇಲೆ ನಿಂತಿತ್ತು. 1920 ಮತ್ತು 1930 ರ ದಶಕದ ಆರಂಭದಲ್ಲಿ ಜರ್ಮನಿಯಲ್ಲಿ ಈ ವಿಚಾರಗಳು ಜನಪ್ರಿಯವಾಗಿದ್ದವು, ಏಕೆಂದರೆ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ಏರಿಳಿತಗೊಂಡಿತ್ತು. 1929 ರಲ್ಲಿ ವಾಲ್ ಸ್ಟ್ರೀಟ್ ಕುಸಿತದ ನಂತರ ಮತ್ತಷ್ಟು ಹದಗೆಟ್ಟಿತು. ಈ ಅನಿಶ್ಚಿತ ಕಾಲದಲ್ಲಿ, ನಾಜಿ ಪಕ್ಷವು ಭರವಸೆಯ ಸಮೃದ್ಧಿಯನ್ನು ನೀಡುತ್ತದೆ. 1932 ರಲ್ಲಿ ಇಟ್ಲರ್ ನ ನಾಜಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಹಿಟ್ಲರ್ ಪ್ರತಿಕಾರದ ಆಡಳಿತವನ್ನು ಆರಂಭಿಸಿದ. ಮುಖ್ಯವಾಗಿ ರಾಜಕೀಯ ಶತ್ರುಗಳನ್ನು ಗುರಿಯಾಗಿಟ್ಟುಕೊಂಡು, ಶಿಬಿರಗಳ ಮೇಲೆ ದಾಳಿ ಮೂಲಸೌಕರ್ಯ ಕಡಿತ, ಯಹೂದಿಗಳ ಪೌರತ್ವದ ಪ್ರಶ್ನೆ ಸಾಂಸ್ಥಿಕ ಚಿತ್ರಹಿಂಸೆ ಕೊನೆಗೆ ಸಾಮೂಹಿಕ ಹತ್ಯೆ ನಡೆಸಿಯೇ ಬಿಟ್ಟಿದ್ದ.

ಚುನಾವಣೆಗೆ ಮುಂಚಿತವಾಗಿ, ನಾಜಿಗಳು ಹಿಟ್ಲರನನ್ನು ಪ್ರಬಲ ನಾಯಕನಾಗಿ ಪ್ರಸ್ತುತಪಡಿಸಲು ಪ್ರಚಾರವನ್ನು ರೂಪಿಸಿದರು. ಆರಂಭಿಕ ವರ್ಷಗಳಲ್ಲಿ, ಹಿಟ್ಲರ್ ನಾಜಿಗಳ ಹಿಂದಿನ ಪ್ರೇರಕ ಶಕ್ತಿಯಾಗಿದ್ದನು ಮತ್ತು ಪಕ್ಷದ ರಚನೆ, ಬ್ರ್ಯಾಂಡಿಂಗ್ ಮತ್ತು ಅದನ್ನು ವಿಶ್ವಾಸಾರ್ಹ ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸುವ ವಿಧಾನಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದನು. ಚುನಾಯಿತರಾದ ನಂತರ, ಹಿಟ್ಲರ್ ವಿರಳವಾಗಿ ಯಹೂದಿಗಳು ಅಥವಾ ಇತರ ಆಂತರಿಕ ಶತ್ರುಗಳ ವಿರುದ್ಧ ನೇರ ಸೇಡು ತೀರಿಸಿಲ್ಲ, ಬದಲಿಗೆ ತನ್ನ ಭದ್ರತಾ ಪಡೆಗಳಾದ ಎಸ್ಎಸ್, ಎಸ್ಎ ಮತ್ತು ಎಸ್ಡಿ ಮತ್ತು ಹೆನ್ರಿಕ್ ಹಿಮ್ಲರ್ ಅವರಿಗೆ ಈ ಕೆಲಸವನ್ನು ನಿರ್ವಹಿಸಲು ನಿರ್ದೇಶಿಸಿದ್ದನು.

ಸರ್ವಾಧಿಕಾರ ವ್ಯವಸ್ಥೆ ಅಪಾಯಕಾರಿಯಾಗಿದೆ. ಅರಿವಿನ ಮೂಲಕ ಸರ್ವಾಧಿಕಾರಿ ವ್ಯವಸ್ಥೆ ನಿರ್ಮಾಣವಾಗುವುದನ್ನು ತಡೆಯಬೇಕು. ಜನರು ಒಗ್ಗಟ್ಟಾಗಿ ,ಸಂಘಟಿತರಾಗಿ ಸರ್ವಾಧಿಕಾರ ವ್ಯವಸ್ಥೆ ವಿರುದ್ಧ ಪ್ರತಿಸ್ಪರ್ಧಿಯಾಗಿ ಆಂದೋಲನ ಸೃಷ್ಟಿ ಮಾಡಬೇಕಿದೆ.