ನವದೆಹಲಿ(04-11-2020): ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪರ ವಕಾಲತ್ತು ವಹಿಸಿಕೊಂಡು ಸುದ್ದಿ ನಿರೂಪಣೆ ಮಾಡುತ್ತಿದ್ದ ಬಲಪಂಥೀಯ ಪರ ಪತ್ರಕರ್ತ ಅರ್ನಬ್ ಗೋಸ್ವಾಮಿಯ ಬಂಧನವಾಗುತ್ತಿದ್ದಂತೆ ಕೇಂದ್ರದ ಬಿಜೆಪಿ ಸಚಿವರು ಅರ್ನಬ್ ಪರ ಬ್ಯಾಟಿಂಗ್ ಮಾಡುತ್ತಿದ್ದು ಇದು ಮಾದ್ಯಮದ ಮೇಲಿನ ದಾಳಿ ಎಂದು ಹೇಳಿದ್ದಾರೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಢೇಕರ್ ಅರ್ನಬ್ ಬಂಧನವನ್ನು ಖಂಡಿಸಿದ್ದಾರೆ.
ಅರ್ನಬ್ ಬಂಧಿಸಿರುವುದು ಯಾಕೆ?
ಮಹಾರಾಷ್ಟ್ರದ ಅಲಿಬಾಗ್ನ 53 ವರ್ಷದ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದಾ ನಾಯಕ್ ಅವರು 2018ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಆತ್ಮಹತ್ಯೆಗೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಕಾರಣ ಎಂದು ಅವರು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ಕಾಲದ ಬಳಿಕ ಅರ್ನಬ್ ಗೋಸ್ವಾಮಿಯನ್ನು ಸಿಐಡಿ ತಂಡವು ಬುಧವಾರ ವಶಕ್ಕೆ ಪಡೆದಿದೆ. ತಮಗೆ ಪಾವತಿಸಬೇಕಿದ್ದ ರೂ. 5.40ಗಳನ್ನು ಅರ್ನಬ್ ಗೋಸ್ವಾಮಿ ಪಾವತಿಸಿಲ್ಲ. ಆ ಕಾರಣ ನಮ್ಮ ಕುಟುಂಬ ತೀವ್ರ ಆರ್ಥಿಕ ತೊಂದರೆಗೆ ಒಳಗಾಯಿತು. ಹೀಗಾಗಿ ನಾವು ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿತ್ತು. ಅಲಿಬಾಗ್ ಪೊಲೀಸರು ಈ ಪ್ರಕರಣವನ್ನು 2018ರಲ್ಲಿ ದಾಖಲಿಸಿಕೊಂಡಿದ್ದರು. 2020ರ ಮೇ ತಿಂಗಳಲ್ಲಿ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಲಾಗಿತ್ತು. ಸದ್ಯ ಆರೋಪಿ ಅರ್ನಬ್ ಗೋಸ್ವಾಮಿಯನ್ನು ಪೊಲೀಸರು ಬಂಧಿಸಿ ಪ್ರಕರಣದ ಕುರಿತಂತೆ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಇನ್ನು ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್ ನನ್ನು ಬಂಧಿಸಿದ ತಕ್ಷಣ ಕೇಂದ್ರ ಸಚಿವರು ಇದು ತುರ್ತು ಪರಿಸ್ಥಿತಿ ಎನ್ನುವಂತಿದೆ. ಮಾದ್ಯಮದ ಮೇಲಿನ ದಾಳಿ ಎಂದೆಲ್ಲಾ ಹೇಳಿಕೆ ಕೊಟ್ಟಿದ್ದಾರೆ. ನಿಜಕ್ಕೂ ಇದು ಕೇಂದ್ರದ ಇಬ್ಭಾಗ ನೀತಿಯನ್ನು ತೋರಿಸುತ್ತದೆ. ಯಾಕೆಂದರೆ ದೇಶದ ವಿವಿಧ ರಾಜ್ಯಗಳಲ್ಲಿ ಪತ್ರಕರ್ತರ ಸ್ವಾತಂತ್ರವನ್ನು ಹತ್ತಿಕ್ಕಲಾಗುತ್ತಿದೆ. ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರಿಗೆ ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿಯಾಗದಂತೆ ತಡೆದಿದ್ದಾರೆ. ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿಗೆ ತೆರಳಿದ ಕೇರಳದ ಪತ್ರಕರ್ತ ಸಿದ್ದೀಕ್ ನನ್ನು ಯುಪಿ ಪೊಲೀಸರು ಮಾರ್ಗ ಮಧ್ಯೆ ಬಂಧಿಸಿದ್ದಾರೆ. ಬಿಜೆಪಿ ಆಡಳಿತದ ರಾಜ್ಯದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಸಿಎಂ ಕುಟುಂಬದ ವಿರುದ್ಧ ಸುದ್ದಿ ಮಾಡಿದ ಪವರ್ ಟಿವಿ ಚಾನಲ್ ನ್ನೇ ಸರಕಾರ ಬಂದ್ ಮಾಡಿತ್ತು. ಇಂತಹ ಹಲವು ಉದಾಹರಣೆಗಳು ದಿನನಿತ್ಯ ಮಾದ್ಯಮ ಸ್ವಾತಂತ್ರ್ಯವನ್ನು ಕಟ್ಟಿಹಾಕುವ ಬಗ್ಗೆ ನಮ್ಮ ಮುಂದೆ ನಿದರ್ಶನವಿದೆ.
ಆದರೆ ಈ ಎಲ್ಲಾ ಸನ್ನಿವೇಶಗಳಲ್ಲಿ ಕೇಂದ್ರ ಸಚಿವರು ಮೌನವಾಗಿದ್ದರು. ತುಟಿಬಿಚ್ಚಿರಲಿಲ್ಲ. ಆದರೆ ಅರ್ನಬ್ ನನ್ನು ಆತ್ಮಹತ್ಯೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಬೆನ್ನಲ್ಲೇ ಕೇಂದ್ರ ಸಚಿವರು ತುರ್ತು ಪರಿಸ್ಥಿತಿ, ಮಾಧ್ಯಮದ ಮೇಲಿನದಾಳಿ ಎಂದೆಲ್ಲಾ ಹೇಳಿಕೆ ಕೊಟ್ಟಿದ್ದು, ಅರ್ನಬ್ ಮಾತ್ರ ಪತ್ರಕರ್ತರೇ? ಬಿಜೆಪಿ ಪರ ವಕಾಲತ್ತು ವಹಿಸುವವರು ಮಾತ್ರ ಪತ್ರಕರ್ತರೇ? ಅಥವಾ ಬ್ರಾಹ್ಮಣ ಪತ್ರಕರ್ತರಿಗೆ ಮಾತ್ರ ಈ ಬೆಂಬಲವೇ? ಒಂದುವೇಳೆ ಅರ್ನಬ್ ತಪ್ಪಿತಸ್ಥ ಆಗಿದ್ದರೆ? ಕೇಂದ್ರ ಸರಕಾರ ಅವರನ್ನು ರಕ್ಷಿಸುತ್ತಾ? ಈಗೆ ಅರ್ನಬ್ ಬಂಧನ ಮತ್ತು ಬಿಜೆಪಿ ಸಚಿವರ ಪ್ರತಿಕ್ರಿಯೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.