-ಡಾ. ಕೆ. ಪಿ. ನಟರಾಜ ಕಲ್ಕರೆ
ಮಾತಾಡುವ, ಬರೆಯುವ, ಹೋರಾಟ ಮಾಡುವ, ಚರ್ಚಿಸುವ ದರ್ದು, ಹುರುಪು, ಅನಿವಾರ್ಯತೆ, ಒತ್ತಡ ಇವೆಲ್ಲ ಬರುವುದೇ ಮಹಿಳೆ ರೈತ ದಲಿತ ಕಾರ್ಮಿಕ ಪ್ರಜಾಪ್ರಭುತ್ವ ಸಂವಿದಾನ ಜಾತ್ಯತೀತತೆ ಇತ್ಯಾದಿ ಆತ್ಮಕ್ಕೆ ಅಗತ್ಯವೆನ್ನಿಸುವ ಸಂಗತಿಗಳ ಬಗೆಗಿನ ಕಾಳಜಿಯ ಮೂಲದಿಂದ. ಅದನ್ನೆಲ್ಲ ಯಾರೂ ಹೇಳಿ ಬರೆಸಲಾಗುವುದಿಲ್ಲ. ಬರೆದವರೆಲ್ಲರೂ ಅದರಲ್ಲೂ ಹೆಚ್ಚು ಬರೆದವರೆಲ್ಲರೂ ಉದಾಹರಣೆಗೆ ಕೋಟ್ಯಂತರ ವಚನಗಳನ್ನು ಬರೆದ ವಚನಕಾರರು, ನೂರಕ್ಕೂ ಹೆಚ್ಚು ರಗಳೆ ಎಂಬ ಹೆಸರಿನ ಸುದಾರಣಾವಾದಿ ಆಗ್ರಹದ ಕಾವ್ಯ ಬರೆದ ಹರಿಹರ , ಮಹಾಕಾವ್ಯಗಳನ್ನು ಬರೆದ ಪಂಪ ಕುಮಾರವ್ಯಾಸಾದಿಗಳು ಅಸಂಖ್ಯಾತ ಸುದಾರಣಾತ್ಮಕ ರಚನೆಗಳನ್ನು ನೀಡಿದ ಪುರಂದರ ಕನಕ ದಾಸರು ಇತ್ಯಾದಿತ್ಯಾದಿ..
ಮೌನದ ನಡುವೆಯೇ ಹೆಚ್ಚು ಮಾತನಾಡಿದ ಬುದ್ದನಿಂದ ಹಿಡಿದು ನಮ್ಮ ಪೂರ್ವಿಕರಾದ ಷರೀಫ, ಸರ್ವಜ್ಙ , ಹಲವು ಸಾವಿರ ಪುಟಗಳ ಗದ್ಯ ಬರೆದ ನಮ್ಮ ಕಾಲದ ಗಾಂಧಿ ಲೋಹಿಯಾ, ಅಂಬೇಡ್ಕರ್, ಕುವೆಂಪು , ಕಾರಂತರು ಲಂಕೇಶ್… ಇವರೆಲ್ಲ ಹೆಚ್ಚು ಬರೆದರು, ಮಾತಾಡಿದರು. ಇದರ ಅರ್ಥ ಅವರ ಕಾಳಜಿಗಳ ನೈಜತೆ ಮತ್ತು ವಿಸ್ತಾರ ಅಷ್ಟಿತ್ತು ಅಂತ ಅರ್ಥ .ಅವರ ಮೇಲೆ ಮಾತಾಡಲೇಬೇಕಾದ ಒತ್ತಡ ಅಷ್ಟಿತ್ತು ಅಂತ ಅರ್ಥ. ಇಲ್ಲದಿದ್ದರೆ ಅವರು ಬರೆಯುತ್ತಲೇ ಇರಲಿಲ್ಲ, ಮಾತಾಡುತ್ತಲೇ ಇರಲಿಲ್ಲ.
ದುಷ್ಟರೂ, ಪ್ರಚಾರ ಪ್ರಿಯರೂ ಬಹಳ ಬರೆದಂತೆ ಕಾಣುವುದುಂಟು. ಆದರೆ ಅವರ ಬರೆವಣಿಗೆ ಪ್ರತಿಪಾದಿಸುವ ಮೌಲ್ಯ ವ್ಯವಸ್ಥೆ ಯನ್ನು ನೋಡಿದರೆ, ಅದು ಎಂತಹ ಸಾಹಿತ್ಯ ಅಥವಾ ಬರೆವಣಿಗೆ ಎನ್ನುವುದು ಗೊತ್ತಾಗಿಬಿಡುತ್ತದೆ. ಅದನ್ನು ‘ಕನ್ನಡ ಪ್ರಜ್ಞೆ’ ವಿಮರ್ಶಾ ಎಚ್ಚರದಿಂದ ಗಮನಿಸುತ್ತಿದೆ ಎನ್ನುವುದೂ ಅಷ್ಟೇ ಸತ್ಯ.
ಇನ್ನು, ಶೋಷಿತರ ಬಗ್ಗೆ ಮಾತಾಡುವುದಾದರೆ, ಮಹಿಳೆ ಬಗ್ಗೆ ಯಾರೋ ಮಾತಾಡುವಂತಹ ಕಾಲ ಹೋಗಿದೆ. ದಲಿತರ ಬಗ್ಗೆ ಕೂಡಾ ಬೇರೆಯವರು ಮಾತಾಡುವ ಕಾಲ ಸರಿದಿದೆ. ಹಾಗೇ ರೈತ ಇತ್ಯಾದಿ ವರ್ಗಗಳ ಬಗ್ಗೆ ಬೇರೆಯವರು ಮಾತಾಡುವ ಕಾಲ ಕೂಡಾ ಸರಿದಿದೆ. ಕಾರ್ಮಿಕರ ಬಗ್ಗೆ ಕೂಡಾ ಅಷ್ಟೇ.
ಇವರೆಲ್ಲ ತಮ್ಮನ್ನು ರೆಪ್ರೆಸೆಂಟ್ ಮಾಡಿಕೊಳ್ಳಲು ಶಕ್ತರಿದ್ದಾರೆ ಅಥವಾ ಅವರು ಶಕ್ತರಾಗಬೇಕಿದೆ.
ಯಾಕೆಂದರೆ ಇದು ಸ್ವಜಾಗೃತಿಯ ಕಾಲ, ಸ್ವಜಾಗೃತಿಯನ್ನು ಬೇಡುವ, ಗ್ರಹಿಸುವ ಕಾಲ. ನಮ್ಮ ರಾಷ್ಟ್ರ ನಿರ್ಮಾಣ ಮಾಡಿದ ಹಿರಿಯರು ನಮ್ಮ ಎದುರು ಇಟ್ಟುಹೋದ ಎಚ್ಚರವೇ ಅದು.
ಯಾರೋ ಬಂದು ನಮ್ಮ ಬಗ್ಗೆ ಮಾತಾಡುವುದಲ್ಲ. ಯಾಕೆಂದರೆ ನಾವೊಂದು ಪ್ರಜಾಪ್ರಭುತ್ವ ರಾಷ್ಟ್ರ. ನಮ್ಮನ್ನು ನಾವೇ ಕಟ್ಟಿಕೊಳ್ಳುವ ಜವಾಬ್ದಾರಿಯನ್ನು ಹೊರಬೇಕಾದ ಅನಿವಾರ್ಯತೆಯನ್ನು ಗುರಿಯಾಗಿ ಸ್ವೀಕರಿಸಿರುವ ರಾಷ್ಟ್ರ. ನಾವು ಸಾಕ್ಷರರಾಗುವ ಹೊಣೆ, ಗಳಿಸಿದ ಅಕ್ಷರದ ಮೂಲಕ ಆತ್ಮೋದ್ಧಾರ ಮತ್ತು ಸಮಾಜ ಅಥವಾ ರಾಷ್ಟ್ರೋದ್ದಾರ ಎರಡನ್ನೂ ಸಾಧಿಸುವ ಹೊಣೆಹೊರುವ ಜವಾಬ್ದಾರಿ ನಮ್ಮ ಮೇಲಿದೆ.
ನಮ್ಮ ಚಿಂತನೆ, ಚರ್ಚೆಗೆ ಕೇಂದ್ರ ವಾಗಿ ಸದಾ ಕಾಲ ಶೋಷಿತ ಸಮುದಾಯವೊಂದಿದೆ. ಅದು ಇರಲೇಬೇಕು ಎಂದು ತಿಳಿಯುವುದು ಮತ್ತು ಅವರ ಬಗ್ಗೆ ಅವರಲ್ಲ ಬೇರೆ ಯಾರೋ ಮಾತಾಡಬೇಕು ಎಂದು ಆಗ್ರಹಿಸುವುದು ಅನಾರೋಗ್ಯಕರವಾದದ್ದು . ಇಂತಹ ಮನಸ್ಸುಗಳು ಅಪ್ರಜ್ಞಾಪೂರ್ವಕವಾಗಿ ಶೋಷಿತ ಸಮುದಾಯ ಶಾಶ್ವತವಾಗಿರಲು ಬಯಸುತ್ತದೆ.
ನಾನು ನನ್ನದೇ ಒಂದು ಉದಾಹರಣೆ ನೀಡ ಬಯಸುವೆ. ಎಚ್ಚೆಂಟಿಯಂತಹ ಕಾರ್ಖಾನೆಯಲ್ಲಿ ಎರಡು ದಶಕಕ್ಕಿಂತ ಹೆಚ್ಚು ಕೆಲಸ ಮಾಡಿ ಅಲ್ಲಿನ ಕಾರ್ಮಿಕರ ಮನಸ್ಥಿತಿ, ವರಸೆ, ಅವರ ವ್ಯಕ್ತಿತ್ವದ ಪರಿಪಕ್ವತೆಯ ಮಟ್ಟವೆಲ್ಲವನ್ನೂ ಹತ್ತಿರದಿಂದ ನೋಡಿದವನು. ಅವರಿಗೆ ಸಂಬಳ, ಬೋನಸ್ಸು ಇನ್ಕ್ರಿಮೆಂಟು, ಪ್ರೊಮೋಷನ್ನು, ಕ್ಯಾಂಟೀನು, ಅವರವರ ಜಾತಿ ಸಂಘಟನೆ , ಸುಪರ್ವೈಸರಿ ಸ್ಟಾಫುಗಳನ್ನು, ಯೂನಿಯನ್ ಲೀಡರ್ರುಗಳನ್ನು ಕರೆಸಿ ಅಕ್ಕ ಅಮ್ಮ ಅಂತ ಬೈಯ್ಯಿಸುವುದು. ಎಲೆಕ್ಷನ್ನುಗಳು, ಗುಂಡು ತುಂಡು ಪಾರ್ಟಿಗಳ ನಡುವೆ ಸಂಸ್ಥೆಯು ನೋಡು ನೋಡುತ್ತಿದ್ದಂತೆಯೇ ಕುಸಿದುಬಿದ್ದಿದ್ದೇ ಗೊತ್ತಾಗಲಿಲ್ಲ.
ಬಿಕ್ಷೆಗಿಂತ ಹೀನವಾದ ಪೆನ್ಷನ್ ಸ್ಕೀಮಿನ ಬಿಡಿಗಾಸಿಗೆ ಕಾಯಬೇಕಾದ ಸ್ಥಿತಿ ಬಂದಿರುವುದು ನಮಗೆ ನಿವೃತ್ತರಾದ ನಂತರ ಗೊತ್ತಾಗಿದೆ . ಇವತ್ತು ನಮಗೆ ಸಬ್ಸ್ಕ್ರಿಪ್ಷನ್ ಬೇಸ್ಡ್ ಪೆನ್ಷನ್ ಸ್ಕೀಮಿನಲ್ಲಿ ಬರುವ 1380 ರೂಪಾಯಿ ಪೆನ್ಷನ್ ತಗೊಂಡು ಮೂದೇವಿಗಳ ತರ ಮೂಲೆ ಸೇರಿದ್ದೀವಿ.
ಆದ್ದರಿಂದ ಮಹಿಳೆ, ದಲಿತ, ಕಾರ್ಮಿಕ, ರೈತ ಯಾರೇ ಅಗಲಿ ಜಾಗೃತಿ ಅವರಲ್ಲೇ ಮೂಡಬೇಕು. ಅದರೆ ಅವರ್ಯಾರನ್ನೂ ಈ ಜಾಗೃತಿ ಎಂಬ ಮಾಯೆ ಮುಟ್ಟುವ ಹಾಗೆ ಕಾಣುತ್ತಿಲ್ಲ. ಹಾಗಿದ್ದಿದ್ದರೆ ಮಹಿಳೆಯರು ಮಹಿಳಾ ಮೀಸಲಾತಿ ಮಸೂದೆಗೆ ಆಗ್ರಹಿಸಿ ಹೋರಾಡುತ್ತಿದ್ದರು. ದಲಿತರು ಬೌದ್ಧ ಧರ್ಮಾಂತರದ ಮೂಲಕ ತಮ್ಮಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆಗಿಳಿಯುತ್ತಿದ್ದರು. ಕಾರ್ಮಿಕರು ಕಾರ್ಪೊರೇಟ್ ಉದ್ಯಮಗಳ ಕಾರ್ಮಿಕ ನೀತಿ ವಿರುದ್ದ ಹೋರಾಟ ಜಾರಿಯಲ್ಲಿಡುತ್ತಿದ್ದರು. ಅದೇ ರೀತಿ ರೈತರು ಪ್ರಭುತ್ವದ ಹಲವು ದೌರ್ಜನ್ಯಗಳ ವಿರುದ್ದ. ಹೋರಾಟ ಘೋಷಿಸುತ್ತಿದ್ದರು. . ಬೇಕಾದರೆ ಪರೀಕ್ಷಿಸಿ ನೋಡಬಹುದಾಗಿದೆ. ನಾವು ಮಹಿಳೆ ರೈತ ದಲಿತ ಕಾರ್ಮಿಕ ಹಿಂದುಳಿದ ಎಂದು ಬರೆದಾಗೆಲ್ಲ ಅದು ಸರ್ವೋದಯದ ಜಾತ್ಯತೀತ ಅರ್ಥದಲ್ಲಿ ಸ್ವೀಕೃತಗೊಳ್ಳದೆ ಸೆಕ್ಟೇರಿಯನ್ ಹಿತಗಳಾಗಿ ಪರಿಗಣಿಸಲ್ಪಟ್ಟು, ಮತ್ತೆ ಅಂತಿಮವಾಗಿ ಜಾತೀಯತೆಯ ತನ್ನ ಸ್ಥಿತಿಸ್ಥಾಪಕತೆಯಲ್ಲಿ ವಿರಮಿಸುತ್ತಿರುತ್ತದೆ.
ಇದನ್ನು ಹೇಳಲೂ ಒಂದು ಕಾರಣವಿದೆ. ಸಿದ್ದರಾಮಯ್ಯನವರು ತಮ್ಮ ಫೇಸ್ ಬುಕ್ ಟೈಂಲೈನ್ ನಲ್ಲಿ ಕೆಲವು ಶೋಷಿತ ಜಾತಿಗಳನ್ನು ಅನುಸೂಚಿತ ಪಂಗಡಕ್ಕೆ ಸೇರಿಸುವ ಬಗ್ಗೆ ಮಾತಾಡಿದರೆ, ಎಂದೂ ಯಾವ ವಿಚಾರದ ಬಗ್ಗೆಯೂ ತಲೆಕೆಡಿಸಿಕೊಂಡಿರದ ಸೋಷಿಯಲ್ ಮೀಡಿಯಾದ ಕೆಲವು ಜನ ”ನಮ್ಮ ಜಾತಿಯನ್ನು ಅಲ್ಲಿ ಸೇರಿಸಿ’, ‘ನಮ್ಮನ್ನು ST ಗೆ ಪರಿಗಣಿಸಿ’, ಅದು ಮಾಡಿ ,ಇದು ಮಾಡಿ ಎಂದು ಬರೆದುಕೊಳ್ಳುತ್ತಾರೆ. ಅವರಲ್ಲಿ ಹಿಂದಿನ ಕಾಲದಿಂದಲೂ ಅನ್ನ ಕಂಡ ಜಮೀನಸ್ತ ಬಹುಸಂಖ್ಯಾತ ಜಾತಿಗಳ ಜನ ಇರುವುದು ಕಂಡು ನಾನು ವ್ಯಗ್ರನಾಗುತ್ತೇನೆ.
ಇದು ಜನಸಾಮಾನ್ಯರ ಗುಣ. ಅದು ಕೂಪವಾಸದಲ್ಲಿಯೇ ಸುಖಿಸಲೆಳಸುತ್ತಿರುತ್ತದೆ. ಅದರೆ ಜಾಗೃತಗೊಂಡವರು ನಾವೊಂದು ಸಾವಯವ ಸಮಾಜದ ಭಾಗ. ಅನ್ಯರ ನೋವು ನಮ್ಮದೇ ಎಂದುಕೊಂಡು ಬರೆಯುತ್ತಾರೆ, ಬರೆಯುತ್ತಲೂ ಇದ್ದಾರೆ.