ಆಂಧ್ರಪ್ರದೇಶ(09-11-2020): ಇಬ್ಬರು ಟ್ರಾಫಿಕ್ ಪೊಲೀಸ್ ಪೇದೆಗಳು ಜನನಿಬಿಡ ಬೀದಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಕಪಾಳಮೋಕ್ಷ ಮಾಡಿ ಒದೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಆಂಧ್ರಪ್ರದೇಶದ ಹಿರಿಯ ಅಧಿಕಾರಿಗಳ ಗಮನಕ್ಕೆ ಕೂಡ ಈ ಘಟನೆ ಬಂದಿದೆ. ಈ ಘಟನೆ ನ.1ರ ರಾತ್ರಿ ಸಂಭವಿಸಿದೆ ಆದರೆ ಸುಮಾರು ಒಂದು ವಾರದ ನಂತರ ಬೆಳಕಿಗೆ ಬಂದಿದೆ.
ಪೊಲೀಸರು ಹಲ್ಲೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಮಾದ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಕಾಕಿನಾಡಾ ಉಪ ಪೊಲೀಸ್ ಅಧೀಕ್ಷಕ (ಡಿಎಸ್ಪಿ) ಕಾನೂನು ಮತ್ತು ಸುವ್ಯವಸ್ಥೆ ಭೀಮಾ ರೆಡ್ಡಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾನ್ಸ್ಟೆಬಲ್ಗಳ ವರ್ತನೆ “ಸರಿಯಾಗಿಲ್ಲ” ಮತ್ತು ‘ಇದು ಸ್ನೇಹಿ ಪೋಲಿಸಿಂಗ್ ನೀತಿಗೆ’ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ, ಥಳಿಸಲ್ಪಟ್ಟ ಇಬ್ಬರು ವ್ಯಕ್ತಿಗಳು ಘಟನೆಯ ಸಮಯದಲ್ಲಿ ಕುಡಿದಿದ್ದರು. ಅವರು ದಂಪತಿಗಳೊಂದಿಗೆ ಜಗಳಕ್ಕೆ ಇಳಿದಿದ್ದರು ಮತ್ತು ಓರ್ವ ಮಹಿಳೆಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಈ ವೇಳೆ ಮಧ್ಯಪ್ರವೇಶಿಸಿದ ಟ್ರಾಫಿಕ್ ಪೊಲೀಸ್ ಅಧಿಕಾರಿಗಳನ್ನು ನಿಂದಿಸಿದ್ದಾರೆ ಮತ್ತು ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.