ಅನಾಥ ಶವಗಳಿಗೆ ದೇವರೆನ್ನುವ ‘ಬಾಡಿಮಿಯಾ’ ಅಯೂಬ್ ಅಹ್ಮದ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಾಲಾಜಿ ಕುಂಬಾರ, ಚಟ್ನಾಳ

ಈತ ಓದಿದ್ದು ಬರೀ ಮೂರನೇ ಕ್ಲಾಸ್, ಮುಂದಿನ ಶಿಕ್ಷಣ ತಲೆಗೆ ಹತ್ತಲಿಲ್ಲ. ಒಂಬತ್ತು ವರ್ಷದ ಸ್ಕೂಲ್ ಡ್ರಾಪ್ ಔಟ್ ಹುಡುಗನೊಬ್ಬ ಮುಂದೇನು ಮಾಡಿದ ಎಂಬುದೇ ತುಂಬಾ ರೋಚಕವಾದ ಕಥೆ. ಹೌದು ಆಶ್ಚರ್ಯ ಎನಿಸಿದರೂ ಸತ್ಯ. ಈತನ ಸಾಮಾಜಿಕ ಕಾರ್ಯ, ಮಾನವೀಯ ಪ್ರೀತಿ, ಅಂತಃಕರಣ, ನೋಡಿದರೆ ಸಾಕು ಎಂಥವರಿಗೂ ಈತನ ಮೇಲೆ ಒಮ್ಮೆಲೇ ಅತೀವ ಗೌರವ, ಪ್ರೀತಿ ಉಕ್ಕುತ್ತದೆ. ಧನ್ಯತೆ ಭಾವ ಮೂಡುತ್ತದೆ.

ಅವರೇ ಮೈಸೂರು ನಗರದ ನಿವಾಸಿ ಅಯೂಬ್ ಅಹಮ್ಮದ್. ಇಂದು ಇವರಿಗೆ ನಲವತ್ತೆರಡು ವಯಸ್ಸು, ಯಾರಿಗೂ ಬೇಡವಾಗಿ ಬಿದ್ದಿರುವ ಅನಾಥ ಶವಗಳಿಗೆ ಅವರವರ ಧರ್ಮದ ವಿಧಿವಿಧಾನಗಳ ಪ್ರಕಾರವೇ ಸ್ವಯಂ ಪ್ರೇರಣೆಯಿಂದ ಗೌರವ ಶ್ರದ್ಧಾಂಜಲಿಯೊಂದಿಗೆ ವಿದಾಯ ಸಲ್ಲಿಸುತ್ತಾರೆ.
ಇದು ಕಳೆದ ಇಪ್ಪತ್ತೆರಡು ವರ್ಷಗಳಿಂದ ಈ ಕಾಯಕವನ್ನು ತುಂಬಾ ಶ್ರದ್ಧೆಯಿಂದ ನಿಭಾಯಿಸುತ್ತಿದ್ದಾರೆ. ‘ನಾನು ಇಲ್ಲಿಯವರೆಗೆ ಬರೋಬ್ಬರಿ ಹತ್ತು ಸಾವಿರಕ್ಕೂ ಹೆಚ್ಚಿನ ಅನಾಥ ಶವಗಳಿಗೆ ನನ್ನ ಸ್ವಂತ ವಾಹನದಲ್ಲಿ ಸಾಗಿಸಿಕೊಂಡು ಅಂತ್ಯಸಂಸ್ಕಾರ ಮಾಡಿದ್ದೇನೆ. ಶವಗಳು ಎಂದರೆ ಯಾವುದೇ ದೆವ್ವ, ಭೂತ, ಪಿಶಾಚಿ ಅಲ್ಲ, ಅವು ದೇವರು ಇದ್ದಂಗೆ, ನಮ್ದುಕೆ ಏನೂ ಭಯ ಭೀತಿ ಆಗಲ್ಲ. ಪ್ರತಿದಿನ ಎರಡ್ಮೂರು ಬಾಡಿಗಳಿಗಾದರೂ ಗೌರವ ಸಲ್ಲಿಸುತ್ತೇನೆ. ಒಮ್ಮೊಮ್ಮೆ ರಸ್ತೆ ಮೇಲೆ ಅನಾಥವಾಗಿ ಬಿದ್ದಿರುವ ಶವವನ್ನು ಕಾರಿನಲ್ಲಿ ಎತ್ತಿಹಾಕಲು ಹರಸಾಹಸಪಟ್ಟಿದ್ದೇನೆ. ಆದರೂ ಈ ಕಾರ್ಯ ಮಾಡಲು ನನಗೆ ಬಹುತ್ ಖುಷಿಯಾಗಿ ಬದುಕಿನ ಕ್ಷಣ ಸಾರ್ಥಕ ಎನಿಸುತ್ತದೆ ಎಂದು ತನ್ನ ಸಾಮಾಜಿಕ ಪ್ರಜ್ಞೆಯನ್ನು ಮನಬಿಚ್ಚಿ ಹೇಳಿಕೊಳ್ಳುವ ಅಯೂಬ್ ಯಾವುದೇ ಅಪೇಕ್ಷೆಯಿಲ್ಲದ ಕಾಯಕಜೀವಿ.

ಅವರೇ ಹೇಳುವಂತೆ ‘ನಂಗೆ ಶಾಲೆಗೆ ಹೋಗೋದು ಅಂದ್ರೆ ಇಷ್ಟ ಆಗಲಿಲ್ಲ, ಮೇಡಂಗೆ ಏನಾದರೊಂದು ಸುಳ್ಳು ಹೇಳಿ ಓಡಿ ಬರ್ತಿದ್ದೆ, ಅನಾಥರಿಗೆ,ಬಡವರಿಗೆ, ಭಿಕ್ಷುಕರಿಗೆ ಕಂಡರೆ ನಮ್ದುಕೆ ತುಂಬಾ ಬೇಜಾರ್ ಆಗ್ತಿತ್ತು,ಅವರಿಗಾಗಿ ಏನಾದರೂ ಹೆಲ್ಪ್ ಮಾಡ್ಬೇಕು ಅನ್ಸಿತ್ತಿತ್ತು. ಈ ಸಮಾಜ್ ಯಾಕ್ ಹಿಂಗೆ, ಎಲ್ರೂ ಮನುಷ್ಯರೇ ತಾನೇ, ಅಂದ್ಮೇಲೆ ಈ ಜಾತಿ – ಧರ್ಮ, ಗರೀಬ್ – ಅಮೀರ್ ಅಂತ ಬೇರೆ ಮಾಡ್ತಾರೆ‌. ಸಬ್ ಜನ್ ಕಾ ಖುನ್ ಏಕೀ ಹೈನಾ, ಫಿರ್ ನಮ್ದು ಜನಾ ನೋಡಿದ್ರೆ ಹ್ಯಾಂಗಿದ್ದಾರೆ, ಇಂಥ ಸಮಾಜ ನೋಡಿದಮ್ಯಾಲೆ ನಂಗೆ ನೆನಪಾಗಿದ್ದು ನಮ್ದು ಅಪ್ಪ ಓದಿಸಿದ ಖುರಾನ್, ನಮ್ದುಕೆ ಅಪ್ಪ ಅಮ್ಮನೇ ಭಗವಾನ್, ಅವರಿಂದಲೇ ನಂಗೆ ‘ಮಾನವೀಯತೆಗೆ ಜಯವಾಗಲಿ’ ಎನ್ನುವ ತತ್ವ ಆವಾಗಲೇ ಮಾಲುಮ್ ಆಯ್ತು ನಂಗೇ, ಎಂದು ತಮ್ಮ ಬಾಲ್ಯದ ನೆನಪುಗಳನ್ನು ಮನಬಿಚ್ಚಿ ಹೇಳುತ್ತಾರೆ.

ಅಯೂಬ್ ಅವರು ಚಿಕ್ಕವರಿದ್ದಾಗ ದೇವಸ್ಥಾನ, ಮಸೀದಿ, ಚರ್ಚುಗಳ ಮುಂಭಾಗ ಭಿಕ್ಷುಕರ ಮಧ್ಯೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕುಳಿತು ಭಿಕ್ಷೆ ಬೇಡುತ್ತಿದ್ದರು. ಬಂದಿದ ಹಣವನ್ನು ಅಲ್ಲಿದ್ದ ಭಿಕ್ಷುಕರಿಗೆ ಹಂಚುತ್ತಿದ್ದರು. ಒಮ್ಮೆ ಇದನ್ನು ನೋಡಿದ ಮನೆಯವರು ಚರ್ಮದ ಬೆಲ್ಟ್ ದಿಂದ ರಕ್ತ ಬರುವ ಹಾಗೇ ಬಾರಿಸಿದರು. ಆದರೆ ಅಲ್ಲಿದ್ದ ಭಿಕ್ಷುಕರೇ ಅಯೂಬ್ ಪರವಾಗಿ ವಕಾಲತ್ತು ನಡೆಸಿ ಸಮಜಾಯಿಸಲು ಮುಂದಾಗಿ, ‘ಅಯೂಬ್ ಭಾಯ್ ಭಿಕ್ಷೆ ಬೇಡಿದ್ದು ತನಗಾಗಿ ಅಲ್ಲ, ನಾವೆಲ್ಲ ಇದ್ದೆವಲ್ಲ ನಮಗಾಗಿ, ಅವರು ಬೇಡಿದ ಭಿಕ್ಷೆಯನ್ನೆಲ್ಲಾ ನಮಗೆ ಹಂಚಿದ್ದಾರೆ ಎಂದು ಭಿಕ್ಷುಕರೆಲ್ಲರೂ ಸ್ಪಷ್ಟನೆ ನೀಡಿದರು. ಅದಾದ ನಂತರ ಅಯೂಬ್ ಅವರು ಕೆಲವು ದಿವಸ ಬೆಂಗಳೂರಿನ ವಾಟರ್ ಕಂಪನಿಯಲ್ಲಿ ಕೆಲಸ ಮಾಡಿದರು. ಅಲ್ಲಿಯೂ ಸಮಾಜ ಸೇವೆಯ ಅವರ ಉತ್ಕಟತೆ ಅವರನ್ನು ಸಂಪೂರ್ಣವಾಗಿ ಮಾನವೀಯತೆ ಕಾರ್ಯದ ಕಡೆಗೆ ಎಳೆದುಕೊಂಡು ತಂದು ನಿಲ್ಲಿಸಿದೆ.

“ಮನುಷ್ಯನಾಗಿ ಹುಟ್ಟಿದಮ್ಯಾಗೆ ಏನಾದರೂ ಒಳ್ಳೇದು ಮಾಡ್ಬೇಕು, ಇದು ಬಾಡಿಗೆ ಮನೆ, ಯಾರ್ದೂ ಪರ್ಮನೆಂಟ್ ಮನೆ ಇಲ್ಲ, ಇದ್ದಷ್ಟು ದಿವಸ್ ಸಮಾಜಕ್ಕಾಗಿ ಮೈನತ್ ಮಾಡ್ಬೇಕು, ಮತ್ತೊಬ್ಬರ ಕಣ್ಣೀರು ಒರೆಸುವ ದಿಲ್ ನಮ್ದು ಇರ್ಬೇಕು. ಈಗ ನಾನು ಅದನ್ನೇ ಮಾಡ್ತಾ ಇದ್ದೀನಿ” ಎಂದು ಹೇಳುವ ಅಯೂಬ್ ಅವರಿಗೆ ಸಮಾಜದ ಬಗ್ಗೆ ಇನ್ನಿಲ್ಲದ ಪ್ರೀತಿ, ಕಾಳಜಿ ಇದೆ, ಬಡವರ ಬಗ್ಗೆ ಗೌರವವಿದೆ, ಅನಾಥ ಮೇಲೆ ಮಮಕಾರ ಇದೆ‌. ಸರಳ ಸಜ್ಜನಿಕೆ ಮೈಗೂಡಿಸಿಕೊಂಡು ಜೊತೆಗೆ ವಿಶೇಷ ಧಾರ್ಮಿಕ ಬದ್ಧತೆ, ಅಂತಃಕರಣ ಹಾಗೂ ತಾತ್ವಿಕತೆಯನ್ನು ಬೋಧಿಸುವ ಇವರ ಮಾತುಗಳು ಯಾವ ಸಂತ , ಸ್ವಾಮೀಜಿ, ಮೌಲ್ವಿ, ಫಾದರ್ ಗಳಿಗೂ ಕಮ್ಮಿಯಿಲ್ಲ ಎಂದೆನಿಸುತ್ತದೆ. ಹೀಗಾಗಿ ಮೈಸೂರು ಇವರನ್ನು ‘ಬಾಡಿಮಿಯಾ’, ‘ಮೈಸೂರಿನ ವೀರ ಬಾಹು’ಎಂದೂ ಪ್ರೀತಿಯಿಂದ ಕರೆಯುತ್ತಿದೆ.

‘ಬಾಡಿಮಿಯಾ’ನಾಗಿ ಇಪ್ಪತ್ತೆರಡು ವರ್ಷಗಳ ಕಾಲ ಸುಧೀರ್ಘ ಅವಧಿ ಪೂರೈಸಿದ ಅಯೂಬ್ ಹಿಂದೊಮ್ಮೆ ನಡೆದ ಒಂದು ಘಟನೆ ಸ್ಮರಿಸುತ್ತಾರೆ: “ನಾನು ಹೊಸ ಕಾರೊಂದನ್ನು ಖರೀದಿ ಮಾಡಲು ಬಸ್ ನಲ್ಲಿ ಗುಂಡ್ಲುಪೇಟೆಗೆ ಹೋಗುತ್ತಿದ್ದೆ. ಬಂಡಿಪಾಳ್ಯದ ಬಳಿ ಚಾಲಕ ಬಸ್ ನಿಲ್ಲಿಸಿದ, ನೋಡಿದರೆ ಜನಸಮೂಹದ ಮಧ್ಯೆ ಶವವೊಂದು ಬಿದ್ದಿತ್ತು. ಸಂಜೆ ತಿರುಗಿ ತನ್ನ ಹೊಸ ಕಾರಿನೊಂದಿಗೆ ಅದೇ ಮಾರ್ಗದಲ್ಲಿ ಬರುತ್ತಿದ್ದೆ, ಆ ಶವ ಅಲ್ಲೇ ಬಿದ್ದಿತ್ತು. ಅಲ್ಲಿದ್ದವರಿಗೆ ಕೇಳಿದಾಗ, ಇವರಿಗೆ ಯಾರೂ ದಿಕ್ಕಿಲ್ಲ, ಎಂದರು. ಯಾರಿಲ್ಲ ಅನ್ನೊದು ಯಾಕೆ, ಮೈ ಹೂಂ ನಾ ಎಂದೆ, ನನ್ನ ಹೊಸ ಕಾರಿನಲ್ಲಿ ಸಾಗಿಸಿಕೊಂಡು ಆಸ್ಪತ್ರೆಗೆ ತಲುಪಿಸಿದ್ದೇನೆ ಎಂದು ನೆನಪಿಸುತ್ತಾರೆ.

‘ಎಲ್ಲರೂ ಹೊಸ ಕಾರ್ ಖರೀದಿಸಿ ಯಾವುದಾದರೂ ಮಂದಿರ,ಮಸೀದಿ, ಚರ್ಚಿಗೋ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸುತ್ತಾರೆ. ಅಪ್ಪ-ಅಮ್ಮ, ಮಕ್ಕಳು, ಹೆಂಡ್ತಿಗೆ ಕೂಡಿಸಿಕೊಂಡು ಒಂದು ಫಸ್ಟ್ ರೌಂಡ್ ಹೋಗ್ತಾರೆ. ಆದರೆ ಮೈ ವೈಸೇ ನಹೀ ಕಿಯಾ, ನಯಾ ಕಾರಿನಾಗೇ ಡೆಡ್ ಬಾಡಿಗೆ ಹಾಕೊಂಡ್ ಹೋದೆ’ ಇದೆಲ್ಲ ಪವಾಡ ಹಾಗೇ ನಡೆದಿದೆ. ಇಂದಿಗೂ ನನ್ನ ಕಾರಿಗೆ ಡಿಸೇಲ್ ಕಮ್ಮಿ ಬಿದ್ದಿಲ್ಲ, ಎಲ್ಲವೂ ಭಗವಾನ್ ಕೀ ದುವಾ’ ಇದೆ ಎಂದು ಸ್ಮರಿಸುತ್ತಾರೆ.

ಕೊರೋನಾ ಕಾಲದಲ್ಲಿ ಏನಿಲ್ಲವೆಂದರೂ ಐನೂರು ಶವಗಳಿಗೆ ಅಂತ್ಯಸಂಸ್ಕಾರ ಮಾಡಿದ್ದಾರೆ ಈ ಬಾಡಿಮಿಯಾ. ” ಒಮ್ಮೆ ಆಸ್ಪತ್ರೆಯಲ್ಲಿ ಗಂಡನನ್ನು ಕಳೆದುಕೊಂಡ ಹೆಣ್ಣು ಮಗಳು ತಯಾರೂ ಇಲ್ಲ ಎಂದು ಅಳ್ತಾ ಇದ್ದಳು. ನಾನು ಹೋದ ತಕ್ಷಣ ನನ್ನ ಕಾಲಿಗೆ ಬಿದ್ದು, ಅಣ್ಣಾ, ಈ ಶವ ತೆಗೆದುಕೊಂಡು ಹೋಗಲು ಸಹಕರಿಸಿ ಎಂದು ವಿನಂತಿಸಿಕೊಂಡು ಹತ್ತು ಸಾವಿರ ಹಣ ಮುಂದಿಟ್ಟಳು. ನೋಡು ತಂಗಿ, ನೀನು ಬಾಯ್ತುಂಬಾ ನಮ್ದುಕೆ ಅಣ್ಣ ಅಂತ ಕರೆದೆ, ಆವಾಗಲೇ ನೀನು ನನ್ನ ತಂಗಿಯಾದೆ, ಹಣ ಕೊಟ್ಟರೆ ನಾ ಬರೋದಿಲ್ಲ, ನಾನು ನಿನ್ನ ಅಣ್ಣನಾಗಿ ಬರುತ್ತೇನೆಂದು ಶವ ಕಾರಿನಲ್ಲಿ ಹಾಕೊಂಡ್ ಹೋದೆ, ನೀನು ನಿಜಕ್ಕೂ ಮನುಷ್ಯ ಅಲ್ವಪ್ಪ, ಖಂಡಿತ ದೇವರ ಪ್ರತಿರೂಪವೇ ಇರ್ಬೇಕು ಎಂದು ಹೇಳುತ್ತಾ ಕಣ್ಣೀರು ಹಾಕುವಾಗ ನಂಗೂ ದುಃಖ ತಡೆದುಕೊಳ್ಳಲು ಸಾಧ್ಯವಾಗಿಲ್ಲ” ಎನ್ನುವ ಹಲವು ಘಟನೆಗಳು ಅಯೂಬ್ ಅವರ ಬದುಕಿನಲ್ಲಿ ಕಂಡಿದ್ದಾರೆ.

ಮೊದಮೊದಲು ಅನಾಥ ಶವಗಳನ್ನು ಒಬ್ಬನೇ ಕಾರಿನಲ್ಲಿ ಹಾಕುವಾಗ ಭಯ ಆಗುತ್ತಿತ್ತು. ಕೆಲವರು ‘ಹೆಣ ಎತ್ತುವವ’ ಎಂದು ಕರೆದಿದ್ದಾರೆ. ಆದರೂ ಇವರ ನೈತಿಕ ಶಕ್ತಿ, ಧಾರ್ಮಿಕ ಬದ್ಧತೆ, ಅಪ್ಪನ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ಅನಾಥ ಹೆಣಗಳಿಗೆ ಆಪ್ತ ಬಂಧುವಾದ ಕರುಣಾಮಯಿ ಅಯೂಬ್ ಇಂದಿಗೂ ತಮ್ಮ ನಿಸ್ವಾರ್ಥ ಸೇವೆ ಮುಂದುವರಿಸಿದ್ದಾರೆ.

ಬಹುತೇಕರು ಯಾವುದಾದರೂ ಒಂದೇ ಕಾರ್ಯವನ್ನು ‘ಸಮಾಜ ಸೇವೆ’ ಎಂದು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಅಯೂಬ್ ಹಾಗಲ್ಲ. ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುವ ಪರೋಪಕಾರಿ ಕಾಯಕದ ಜೊತೆಗೆ ಇತರೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಕಳೆದ ಮೂರು ವರ್ಷಗಳಿಂದ ಅಪ್ಪನ ಹೆಸರಿನಲ್ಲಿ ‘ಅನಾಥಶ್ರಮ’ ನಡೆಸುತ್ತಿದ್ದಾರೆ. ಮಗಳ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಟೈಲರಿಂಗ್ ತರಬೇತಿ ಕೊಡ್ತಾರೆ, ರೈಲ್ವೆ ಸ್ಟೇಶನ್ ನಲ್ಲಿರುವ ಹಸಿದ ಹೊಟ್ಟೆಗಳಿಗೆ ಅನ್ನ ಹಂಚುತ್ತಾರೆ.. ಹೀಗೆ ‘ಬಹುಮುಖಿ ಸಮಾಜ ಸೇವಕ’ನಾಗಿದರೂ ಇವರಿಗೆ ಇನ್ನೊಂದು ಮಹತ್ವದ ಕನಸಿದೆ. ತಮ್ಮ ತಾಯಿಯ ಹೆಸರಿನಲ್ಲಿ ಆಸ್ಪತ್ರೆ ಕಟ್ಟಿಸುವುದು, ಬಡ, ನಿರ್ಗತಿಕ,ಅನಾಥರಿಗೆ ಉಚಿತ ಚಿಕಿತ್ಸೆ ಕಲ್ಪಿಸುವ ಅಯೂಬ್ ಅವರ ಘನವಾದ ಉದ್ದೇಶವಿದೆ. ಅದಕ್ಕೆಬೇಕಾದ ಜಾಗದ ಬಗ್ಗೆ ಸಂಬಂಧಿಸಿದವರಿಗೆ ಬೇಡಿಕೆ ಸಲ್ಲಿಸಿದ್ದಾರೆ. ಸರ್ಕಾರ ಇವರ ಬೇಡಿಕೆ ಈಡೇರಿಸುವ ಅಗತ್ಯ ಕೂಡ ಇದೆ.

ಭಾವ ಜೀವಿ ಅಯೂಬ್ ಅವರು ಒಬ್ಬ ಅಪ್ಪಟ ಜಾತ್ಯಾತೀತವಾದಿ, ಇವರಿಗೆ ಯಾವುದೇ ಜಾತಿ, ಧರ್ಮ, ಮತ , ಪಂಥಗಳಿಲ್ಲ. ನಾವ್ ಯಾವುದೇ ಜಾತಿದೂ ಇರ್ಲಿ – ಧರ್ಮದೇ ಇರ್ಲಿ, ನಾವ್ ಅನಾಥ ಶವಗಳಿಗೆ ‘ದಫನ್’ ಮಾಡ್ತೀನಿ, ಒಂದು ಹೆಣ್ಣು ಗಂಡು ಅಂತಾ ಈ ಲೋಕಕ್ಕೆ ಬಂದಿದ್ದಾರೆ, ನಾವ್ ಯಾವತ್ತೂ ಈ ಜಾತಿ ಆ ಜಾತಿ ಅಂತಾ ಯೋಚ್ನೆ ಮಾಡಿ ಕೆಲ್ಸಾ ಶುರು ಮಾಡಿಲ್ಲ. ಭೂಮಿಮೇಲೆ ಇರೋದೇ ಎರಡು ಜಾತಿ ಒಂದು ಹೆಣ್ಣು ಮತ್ತೊಂದು ಗಂಡು, ಈ ಎರಡು ಬಿಟ್ಟು ಬೇರೆ ಯಾವುದೂ ಇಲ್ಲ ಎಂಬುದು ಅವರ ಮನದಾಳದ ಮಾತುಗಳು.

ನಮ್ದು ತಂದೆ ತಾಯಿ ನಮ್ಗೆ ಓದ್ಸಿ, ಒಂದು ಪೋಶಿಸನ್ ಮಾಡಿ ಕೊಡ್ತಾರೆ, ಅದೇ ಅವ್ರಿಗೆ ವಯಸ್ಸಾದ ಮೇಲೆ ನಾವು ಚನ್ನಾಗಿ ನೋಡ್ಕೋಬೇಕು, ಎಷ್ಟೋ ಮಕ್ಕಳು ತಂದೆ – ತಾಯಿಗೆ ಹೊಡೆದಿದ್ದು ನೋಡಿದ್ದೇನೆ. ಆದರೆ ಅಂಥ ತಂದೆ -ತಾಯಿಯ ಕಣ್ಣಲ್ಲಿ ನೀರು ಬರಲ್ಲ, ಅದು ರಕ್ತ ಬಂದಾಗೇ. ಈ ರೀತಿ ತೊಂದ್ರೆ ಯಾವುದೇ ಮಕ್ಕಳು ಕೊಡಬಾರ್ದು, ನಮ್ದುಕೆ ರಿಯಲ್ ದೇವ್ರು ಅಂದ್ರೆ ತಂದೆ ತಾಯಿ ಮಾತ್ರ, ಅವರಿಗೆ ಚನ್ನಾಗಿ ನೋಡಿದರೆ ಸಾಕು ನಿಮ್ಮ ಕಣ್ಮುಂದೆ ಸ್ವರ್ಗ ಕಾಣ್ತುದೆ ಎಂದು ಹೇಳುವ ಶ್ರಮಜೀವಿ ಡಾ. ಅಯೂಬ್ ಅಹಮ್ಮದ್ ಅವರದ್ದು ಅಪರೂಪದ ಬದುಕು. ಅಮೇರಿಕಾದ ಡಾಕ್ಟರೇಟ್, ದೇಶದ ಹಲವು ಪ್ರತಿಷ್ಠಿತ ಗೌರವ, ಪ್ರಶಸ್ತಿಗಳಿಗೂ ಭಾಜನರಾಗಿರುವ ಇವರಿಗೆ ‘ಜೀವನ ಪ್ರೀತಿ’ಯೇ ಮುಖ್ಯವಾಗಿದೆ. ‘ದಯವೇ ಧರ್ಮದ ಮೂಲ’ ಎನ್ನುವ ಶರಣ ಸಿದ್ಧಾಂತವನ್ನು ಅನುಷ್ಠಾನಗೊಳಿಸಿ ಮಾನವ ಜನಾಂಗದ ಘನತೆಯನ್ನು ನಿಸ್ವಾರ್ಥವಾಗಿ ಬಿತ್ತುವ ಇಂಥ ಅಪರಂಜಿ ‘ಮೈಸೂರಿನ ಬಾಡಿಮಿಯಾ’ ಅಯೂಬ್ ಭಾಯಿಗೆ ನಿಮದೊಂದು ಸಲಾಂ ಹೇಳಲು ಮರೆಯದಿರಿ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು