ವಾಷಿಂಗ್ಟನ್ ಡಿಸಿ(12-11-2020) ಅಮೇರಿಕಾ ರಾಜ್ಯ ಕಾರ್ಯದರ್ಶಿ ಮೈಕ್ ಪೋಂಪಿಯೋ ನಾಳೆಯಿಂದ ವಿವಿಧ ಗಲ್ಫ್ ದೇಶಗಳಿಗೆ ಪ್ರವಾಸ ಮಾಡಲಿದ್ದಾರೆ. ನಾಳೆ ಆರಂಭವಾಗುವ ಪ್ರವಾಸ ನವೆಂಬರ್ 23 ರಂದು ಕೊನೆಯಾಗಲಿದೆ.
ಯುಎಇ ಸಂದರ್ಶಿಸುವ ಪೋಂಪಿಯೋ, ಅಲ್ಲಿನ ಪಟ್ಟದ ರಾಜಕುಮಾರ ಮುಹಮ್ಮದ್ ಬಿನ್ ಝಾಯಿದ್ ಜೊತೆ ಮಾತುಕತೆ ನಡೆಸಲಿದ್ದಾರೆ. ರಕ್ಷಣೆ, ಪರಸ್ಪರ ಸಹಕಾರ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗೆಗೆ ಚರ್ಚಿಸಲಿದ್ದಾರೆ. ಬಳಿಕ ಕತರಿಗೆ ಭೇಟಿ ನೀಡಿ, ಕತರಿನ ಅಮೀರ್ ಶೈಖ್ ತಮೀಮ್ ಅಲ್-ತಾನಿ ಮತ್ತು ಉಪಪ್ರಧಾನಿಯೂ, ವಿದೇಶಾಂಗ ಸಚಿವರೂ ಆದ ಮುಹಮ್ಮದ್ ಬಿನ್ ಅಬ್ದುಲ್ ರಹಿಮಾನ್ ಅಲ್-ತಾನಿ ಜೊತೆಗೆ ಮಾತುಕತೆ ನಡೆಸಿ, ದ್ವಿಪಕ್ಷೀಯ ಬಾಂಧವ್ಯ, ಪ್ರಾದೇಶಿಕ ಆಗುಹೋಗುಗಳು ಮತ್ತು ಗಲ್ಫ್ ದೇಶಗಳ ಏಕತೆಯ ಕುರಿತು ಚರ್ಚಿಸಲಿದ್ದಾರೆ.
ಬಳಿಕ ಸೌದಿ ಪಟ್ಟದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಜೊತೆಗೆ ಚರ್ಚಿಸಲು ಸೌದಿ ಅರೇಬಿಯಾ ಸಂದರ್ಶಿಸಲಿರುವರು. ಗಲ್ಫ್ ದೇಶಗಳು ಮಾತ್ರವಲ್ಲದೇ ತುರ್ಕಿ, ಜಾರ್ಜಿಯಾ, ಇಸ್ರೇಲ್ ಮತ್ತು ಫ್ರಾನ್ಸ್ ಮೊದಲಾದ ದೇಶಗಳಿಗೂ ಅವರ ಪ್ರವಾಸ ಇರಲಿದೆ.