ನವದೆಹಲಿ(26-01-2021): ಲಾಕ್ ಡೌನ್ ವೇಳೆ ಜನರು ಒಪ್ಪೊತ್ತಿನ ತುತ್ತಿಗೂ ಕಷ್ಟಬಂದಿದ್ದಾರೆ. ಕಾರ್ಮಿಕರು ಸಂಚಾರ ವ್ಯವಸ್ಥೆ, ಟಿಕೆಟ್ ಗೆ ಹಣವಿಲ್ಲದೆ ನಡೆದುಕೊಂಡು ತವರಿಗೆ ತೆರಳು ಬೀದಿ ಮಧ್ಯೆ ಮೃತಪಟ್ಟಿರುವ ನಿದರ್ಶನವನ್ನು ನಾವು ಕಂಡಿದ್ದೇವೆ. ಆದರೆ ದೇಶದ ಶ್ರೀಮಂತ 100 ಕೋಟ್ಯಧಿಪತಿಗಳ ಸಂಪತ್ತು 12.97 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ ಎಂದು ಆಕ್ಸ್ಫಾಮ್ ಸಂಸ್ಥೆಯ ವರದಿ ತಿಳಿಸಿದೆ.
ಅಸಮಾನತೆಯ ವೈರಸ್ ಎಂಬ ಶೀರ್ಷಿಕೆಯಡಿ ಆಕ್ಸ್ಫಾಮ್ವರದಿಯನ್ನು ಸಿದ್ದಪಡಿಸಿದ್ದು, ಕೋವಿಡ್ ಲಾಕ್ ಡೌನ್ ಒಂದು ಅಸಮಾನತೆಯನ್ನು ಸೃಷ್ಟಿಸಿದೆ ಎಂದು ಹೇಳಿದೆ. ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಡಯಲಾಗ್ಸ್ ನಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ.
ವರದಿಯಲ್ಲಿ ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಗಂಟೆಗೆ 90 ಕೋಟಿ ರೂ.ಗಳಂತೆ ಆದಾಯ ಗಳಿಸುತ್ತಿದ್ದರು. 100 ಮಂದಿ ದೇಶದ ಕೋಟ್ಯಧಿಪತಿಗಳು ಗಳಿಸಿದ್ದ ಈ ಸಂಪತ್ತನ್ನು ದೇಶದ 13.8 ಕೋಟಿ ಬಡವರಿಗೆ ಹಂಚಿದರೆ, ಪ್ರತಿಯೊಬ್ಬ ಬಡವನಿಗೂ ತಲಾ 94,045 ರೂ. ದೊರೆಯುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೋವಿಡ್ ಸೋಂಕು ಜಗತ್ತಿನ ಅತ್ಯಂತ ಕೆಟ್ಟ ಆರೋಗ್ಯ ಬಿಕ್ಕಟ್ಟಾಗಿದ್ದು, ಅದು 1930ರ ದಶಕದ “ಬಹುದೊಡ್ಡ ಹಿಂಜರಿತ’ದಷ್ಟೇ ದೊಡ್ಡ ಬಿಕ್ಕಟ್ಟು ಎಂದು ವರದಿ ಹೇಳಿದೆ.