ಅಲಹಾಬಾದ್ (05-12-2020): ಮಾರ್ಚ್ನಲ್ಲಿ ನವದೆಹಲಿಯಲ್ಲಿ ತಬ್ಲೀಘಿ ಜಮಾಅತ್ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಮಾವು ನಿವಾಸಿಯೊಬ್ಬರ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಗಮನಿಸಿದೆ. ಇದು ಅಧಿಕಾರದ ದುರುಪಯೋಗ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಮೊಹಮ್ಮದ್ ಸಾದ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದೆ. ಈ ಕುರಿತ ವಿಚಾರಣೆಯನ್ನು ತಡೆಹಿಡಿದು ಹೈಕೋರ್ಟ್ ಈ ಅವಲೋಕನವನ್ನು ಮಾಡಿದೆ. ತಬ್ಲೀಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿಲ್ಲ ಮತ್ತು ಕೋವಿಡ್ ಹರಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾದ ಚಾರ್ಜ್ಶೀಟ್ ಪ್ರಶ್ನಿಸಿ ಸಾದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಅಜಯ್ ಭಾನೋತ್ ಈ ಆದೇಶ ಹೊರಡಿಸಿದ್ದಾರೆ.
ಮಾರಣಾಂತಿಕ ಕಾಯಿಲೆ ಹರಡಿದ್ದಕ್ಕಾಗಿ ಈ ಹಿಂದೆ ಐಪಿಸಿಯ ಸೆಕ್ಷನ್ 269 ಮತ್ತು 270 ರ ಅಡಿಯಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು, ಆದರೆ ನಂತರ ಅದನ್ನು ಹಿಂಪಡೆದು ‘ಕೊಲೆ ಯತ್ನ’ ಐಪಿಸಿಯ ಸೆಕ್ಷನ್ 307 ರ ಅಡಿಯಲ್ಲಿ ಹೊಸ ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನ ಸೆಳೆದಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಸೆಕ್ಷನ್ 307 ಐಪಿಸಿ ಅಡಿಯಲ್ಲಿ ಅರ್ಜಿದಾರರಿಗೆ ಚಾರ್ಜ್ ಶೀಟ್ ಸಲ್ಲಿಸಿರುವುದು ಅಧಿಕಾರದ ದುರುಪಯೋಗವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.