ವಾಷಿಂಗ್ಟನ್(20-12-2020): ಏಲಿಯನ್ಸ್ ಇರುವಿಕೆ ಬಗ್ಗೆ ಮತ್ತೆ ವಿಜ್ಞಾನಿಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಸೌರಮಂಡಲದಾಚೆಗಿನ ಗ್ರಹವೊಂದರಿಂದ ಪತ್ತೆಯಾದ ಸಂಭಾವ್ಯ ರೇಡಿಯೋ ಸಿಗ್ನಲ್ ಅಂತರಾಷ್ಟ್ರೀಯ ವಿಜ್ಞಾನಿಗಳ ನಿದ್ದೆಕೆಡಿಸಿದೆ.
ಅನ್ಯ ಗ್ರಹಗಳಲ್ಲಿ ಜೀವಗಿಳಿದೆಯಾ ಎಂಬ ಪ್ರಶ್ನೆ ಮತ್ತು ಈ ಬಗೆಗಿನ ಸಂಶಯ ಭುಗಿಲೆದ್ದ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಈ ಮೊದಲು ಹಲವು ಅಧ್ಯಯನವನ್ನು ನಡೆಸಿದ್ದರು.
ಖಗೋಳಶಾಸ್ತ್ರ ಹಾಗೂ ಭೌತಶಾಸ್ತ್ರ ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ಪ್ರಕಾರ,ಟೌ ಬೂಟ್ಸ್ ಎಂಬ ನಕ್ಷತ್ರ ವ್ಯವಸ್ಥೆಯಿಂದ ರೇಡಿಯೋ ಸಿಗ್ನಲ್ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ರೇಡಿಯೋ ಸಿಗ್ನಲ್ ನ ಮೂಲ 51 ಜ್ಯೋತಿರ್ವರ್ಷಗಳಷ್ಟು ದೂರವಿದೆ ಎಂದು ಅಂದಾಜಿಸಿದ್ದಾರೆ.
ಈ ತರಂಗಗಳು ಪ್ರಕೃತಿ ಸಹಜವಾಗಿ ಅಥವಾ ಯಾವುದಾದರೂ ಜೀವಿಯ ಹಸ್ತಕ್ಷೇಪದಿಂದ ಅಥವಾ ಆಕಾಶಕಾಯಗಳಲ್ಲಿ ಸ್ಫೋಟವಾದಗಲೂ ಈ ಬೆಳವಣಿಗೆ ಕಂಡು ಬರಲು ಸಾಧ್ಯವಿದೆ ಎಂದು ಖಗೋಳ ತಜ್ಞರು ಅಭಿಪ್ರಾಯವನ್ನು ಪಟ್ಟಿದ್ದಾರೆ.
1967, 1977, 2003ರಲ್ಲೂ ಅನ್ಯಗ್ರಹಗಳಲ್ಲಿ ಜೀವಿಗಳಿರುವ ಬಗ್ಗೆ ಮಹತ್ತರ ಅಧ್ಯಯನಗಳು ನಡೆದಿವೆ. ಆದರೆ, ಇದುವರೆಗಿನ ಯಾವ ಅಧ್ಯಯನದಲ್ಲೂ ಏಲಿಯನ್ ಅಸ್ತಿತ್ವ ಸಾಬೀತಾಗಿಲ್ಲ.