ನವದೆಹಲಿ(09-02-2021): ಕೆಂಪು ಕೋಟೆ ಹಿಂಸಾಚಾರ ಪ್ರಕರಣದ ಆರೋಪಿ ದೀಪ್ ಸಿಧು ಅವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರ ವಿಶೇಷ ಕೋಶ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಟ್ರಾಕ್ಟರ್ ಪೆರೇಡ್ ಸಮಯದಲ್ಲಿ ಗಣರಾಜ್ಯೋತ್ಸವದಂದು ಕೆಂಪು ಕೋಟೆಗೆ ಮುತ್ತಿಗೆ ಹಾಕಲು ರೈತರ ಗುಂಪನ್ನು ಪ್ರಚೋದಿಸಿದ ಆರೋಪ ಪಂಜಾಬಿ ನಟನ ಮೇಲಿದೆ. ಆತನನ್ನು ಪೊಲೀಸರು ಎಫ್ಐಆರ್ನಲ್ಲಿ ಹೆಸರಿಸಿದ್ದಾರೆ.
ಕೆಂಪು ಕೋಟೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಸಿಧು ಮತ್ತು ಇತರ ಮೂವರ ಕುರಿತು ಮಾಹಿತಿ ನೀಡುವವರಿಗೆ ಪೊಲೀಸರು ಕಳೆದ ವಾರ ಒಂದು ಲಕ್ಷ ರೂ.ಗಳ ನಗದು ಬಹುಮಾನವನ್ನು ಘೋಷಿಸಿದ್ದರು.
ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂಬ ತಮ್ಮ ಬೇಡಿಕೆಯನ್ನು ಪೂರೈಸಲು ಜನವರಿ 26 ರಂದು ರೈತ ಸಂಘಗಳು ಕರೆದ ಟ್ರಾಕ್ಟರ್ ಮೆರವಣಿಗೆಯಲ್ಲಿ ಪ್ರತಿಭಟನಾ ನಿರತ ಸಾವಿರಾರು ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು. ಅನೇಕ ಪ್ರತಿಭಟನಾಕಾರರು, ಟ್ರಾಕ್ಟರುಗಳನ್ನು ಓಡಿಸಿ, ಕೆಂಪು ಕೋಟೆಯನ್ನು ತಲುಪಿ ಸ್ಮಾರಕವನ್ನು ಪ್ರವೇಶಿಸಿದರು. ಕೆಲವು ಪ್ರತಿಭಟನಾಕಾರರು ಅದರ ಗುಮ್ಮಟಗಳ ಮೇಲೆ ಧಾರ್ಮಿಕ ಧ್ವಜಗಳನ್ನು ಹಾರಿಸಿದ್ದರು. ಘಟನೆಯ ಪ್ರಮುಖ ಅರೋಪಿ ಸಿಧುಗೆ ಬಿಜೆಪಿ ಜೊತೆ ನಂಟು ಇರುವುದು ಬಹಿರಂಗವಾಗಿತ್ತು. ಈ ಕುರಿತು ವ್ಯಾಪಕವಾದ ಚರ್ಚೆ ಕೂಡ ನಡೆದಿತ್ತು.