ಜೈಪುರ(13-12-2020): ರಾಜಸ್ಥಾನದ ಚಿತ್ತೋರಗರ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಕಾರು ಮತ್ತು ಟ್ರೈಲರ್ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.
ಉದಯಪುರ-ನಿಂಬಾಹೇರಾ ಹೆದ್ದಾರಿಯಲ್ಲಿರುವ ಸದುಲ್ಖೇರಾ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ಟ್ರಕ್ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮೃತರು ಮಧ್ಯಪ್ರದೇಶದ ರತ್ನಂ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಚಿತ್ತೋರ್ಗರ್ ನಿಂದ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ.
ಚಿತ್ತೋರ್ಗರ್ ಜಿಲ್ಲಾಧಿಕಾರಿ ಕಿಶೋರ್ ಕುಮಾರ್ ಶರ್ಮಾ ಈ ಕುರಿತು ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಅಪಘಾತದ ಸಮಯದಲ್ಲಿ 16 ಜನರು ಕಾರಿನಲ್ಲಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಘಟನೆ ಬಗ್ಗೆ ಸಂತಾಪವನ್ನು ಸೂಚಿಸಿದ್ದು, ಗಾಯಗೊಂಡವರ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.