ಆಂಧ್ರಪ್ರದೇಶ(14-02-2021): ಕರ್ನೂಲ್ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಬಸ್ ಮತ್ತು ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.
ಮುಂಜಾನೆ 4 ಗಂಟೆಗೆ ಕರ್ನೂಲ್ ಜಿಲ್ಲೆಯ ವೆಲ್ದುರ್ತಿ ಮಂಡಲದ ಮದರ್ಪುರ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಚಿತ್ತೂರು ಜಿಲ್ಲೆಯ ಜನರು ಹೈದರಾಬಾದ್ ಕಡೆಗೆ ಮಿನಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ರಾಜಸ್ಥಾನದ ಅಜ್ಮೀರ್ಗೆ ತೆರಳುತ್ತಿದ್ದರು. ಈ ವೇಳೆ ಅಪಘಾತ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಮೊದಲು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ನಂತರ ರಸ್ತೆಯ ಇನ್ನೊಂದು ಬದಿಯಲ್ಲಿ ಸಂಚರಿಸುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.
ದುರಂತದ ಬಗ್ಗೆ ಪ್ರತಿಕ್ರಿಯಿಸಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅಪಘಾತದಲ್ಲಿ ಮಹಿಳೆ ಮತ್ತು ಮಕ್ಕಳು ಸೇರಿದಂತೆ ಪ್ರಾಣಹಾನಿ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ಕುಟುಂಬಗಳಿಗೆ ತಕ್ಷಣದ ಪರಿಹಾರ ಮತ್ತು ವೈದ್ಯಕೀಯ ನೆರವು ನೀಡುವಂತೆ ಸಿಎಂ ಜಗನ್ ಮೋಹನ್ ರೆಡ್ಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.