ವಿಜಯಪುರ(04-11-2020): ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 1500ಕ್ಕೂ ಅಧಿಕ ಪೊಲೀಸರನ್ನು ನೇಮಕ ಮಾಡಲಾಗಿದೆ. ಇಷ್ಟು ಅಧಿಕ ಮಂದಿ ಪೊಲೀಸರನ್ನು ನೇಮಿಸಿದ ಅಪರೂಪದ ಪ್ರಕರಣ ಇದಾಗಿದೆ.
ಈ ದಾಳಿಯಲ್ಲಿ ಮಹಾದೇವ ಬೈರಗೊಂಡ ಕಡೆಯ ಇಬ್ಬರು ಸಾವಿಗೀಡಾಗಿದ್ದರು. ದಾಳಿ ಮಾಡಿದವರು ಮಹಾರಾಷ್ಟ್ರದ ಪೂನಾ, ನಾಂದೆಡ್, ಯು.ಪಿ, ಬಿಹಾರಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಈ ಅಪರಾಧ ಪ್ರಕರಣದ ಪತ್ತೆಗಾಗಿ ಓರ್ವ ಎಸ್ಪಿ, ಇನ್ನೊಬ್ಬರು ಹೆಚ್ಚುವರಿ ಎಸ್ಪಿ, 37 ಇನ್ಸ್ಪೆಕ್ಟರ್ಗಳು ನೇತೃತ್ವದ 10ಕ್ಕೂ ಅಧಿಕ ತಂಡಗಳ ರಚನೆಯಾಗಿದೆ. ಒಟ್ಟು ಒಂದೂವರೆ ಸಾವಿರ ಪೊಲೀಸರು ಇದೊಂದೇ ಪ್ರಕರಣದ ತನಿಖಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಗುಂಡಿನ ದಾಳಿ ನಡೆದ ಸ್ಥಳದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪೊಲೀಸರಿಂದ ಶೋಧ ನಡೆಯುತ್ತಿದೆ. ಭೀಮಾತೀರದ ಚಡಚಣ, ಕೆರೂರ, ಟಾಕಳಿ, ಉಮರಾಣಿ, ಲೋಣಿ, ಕೊಂಕಣಗಾಂವ ಸುತ್ತಲೂ ಪೊಲೀಸರ ತಂಡ ಗಸ್ತಿನಲ್ಲಿದೆ.