ಮಂಗಳೂರು (20-10-2020): ಕೊವಿಡ್ ಕಾರಣದಿಂದ ಮುಂಬರುವ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ದೇರಳಕಟ್ಟೆಯ ಯೆನೆಪೋಯಾ ಸಂಸ್ಥೆಯ ಫಾರ್ಮಸಿ ವಿದ್ಯಾರ್ಥಿಗಳು ಕಳೆದ ಹಲವು ದಿನಗಳಿಂದ ಒತ್ತಾಯಿಸುತ್ತಿದ್ದು, ವಿದ್ಯಾರ್ಥಿಗಳ ಬೇಡಿಕೆಯನ್ನು ಸಂಸ್ಥೆಯು ಪರಿಗಣಿಸಬೇಕೆಂದು ಕ್ಯಾಂಪಸ್ ಫ್ರಂಟ್ ಒತ್ತಾಯಿಸಿದೆ.
ವಿದ್ಯಾರ್ಥಿಗಳ ಪ್ರಕಾರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿದಾಗ 20 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದ್ದು ಆದ್ದರಿಂದ ಕಾಲೇಜಿಗೆ ತೆರಳಿ ಪರೀಕ್ಷೆ ಬೇಡ ಆನ್ಲೈನ್ ಮುಖಾಂತರ ಪರೀಕ್ಷೆ ನಡೆಸಬೇಕು. ಹಾಗೂ ಕಾಲೇಜು ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದುಪಡಿಸಲಾಗುವುದೆಂದು ಹೊರಡಿಸಿದ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಬೇಕು, ಈ ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ ಕಾಲೇಜು ಶುಲ್ಕ ಪಾವತಿಸಲು ಹೆಚ್ಚುವರಿ ಸಮಯವಕಾಶವನ್ನು ನೀಡಬೇಕೆಂದು ಯೆನಪೋಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಬೇಡಿಕೆಯಾಗಿರುತ್ತದೆ.
ಕ್ಯಾಂಪಸ್ ಫ್ರಂಟ್ ಮುಖಂಡರು ಪ್ರಾಂಶುಪಾಲರನ್ನು ಸಂಪರ್ಕಿಸಿ ಮಾತನಾಡಿದ್ದು ಈ ಎಲ್ಲಾ ಬೇಡಿಕೆಯನ್ನು ಸಂಸ್ಥೆಯು ಪರಿಗಣಿಸಿ ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿದೆ ಎಂದು ಕ್ಯಾಂಪಸ್ ಫ್ರಂಟ್ ಜಿಲ್ಲಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.