ನಶಿಸಿದ ತಾರತಮ್ಯ ಪ್ರಜ್ಞೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

-ಡಾ ಕೆ ಪಿ ನಟರಾಜ ಕಲ್ಕರೆ

ತಮ್ಮ ಇಷ್ಟಾನಿಷ್ಟಗಳ ಬಗೆಗೆ ಗಂಭೀರವಾಗಿ ಚಿಂತಿತರಾಗದವರು ಒಳಿತು ಮತ್ತು ಕೆಡುಕು ಎರಡರ ಕುರಿತು ಒಂದೇ ಪದ ಹಾಡುತ್ತಿರುತ್ತಾರೆ ಇಂತಹದ್ದನ್ನು ಕೇಳುತ್ತಿದ್ದರೆ ಆಯುಸ್ಸು ಕ್ಷೀಣಿಸಿ ಬಿಡುತ್ತದೇನೋ ಎಂಬಂತೆ ಭಾಸವಾಗುತ್ತದೆ, ಭಯವಾಗುತ್ತದೆ.

ಯಾರೋ ಒಬ್ಬರು ಮತ್ತೊಬ್ಬರಿಗೆ ಯಾವುದೋ ಪ್ರಶಸ್ತಿ ಬಂದಿದ್ದಕ್ಕೆ ಅಭಿನಂದಿಸಿದ್ದನ್ನು‌ ನೋಡಿದ ಮೇಲೆ ಇದನ್ನು ಬರೆಯುತ್ತಿರುವೆ. ಎಲೆಕ್ಷನ್ ಹೊಸ್ತಿಲಲ್ಲಿ ಕೊಲೆಗಡುಕ ಪಾರ್ಟಿಯ ಎದುರು ನಿಂತಿರುವ ಇದ್ದುದ್ದರಲ್ಲಿ ಒಳ್ಳೆಯವನೊಬ್ಬನಿಗೆ ಕ್ಲಾಸ್ ತೆಗೆದುಕೊಂಡಿರುವ ಚುನಾವಣಾ ಪೂರ್ವ ವಿಶ್ಲೇಷಣಾ ವರದಿ ಮೇಲೆ ಕಣ್ಣಾಡಿಸಿದೆ.

‘ತಾರತಮ್ಯ ಮಾಡಬಾರದು’ ಎಂಬುದನ್ನು ಇವರಿಗೆ ಎಳೆಯ ಪ್ರಾಯದಲ್ಲಿ ಯಾರೋ ಹೇಳಿದ್ದನ್ನು ಅಕ್ಷರಶಃ ಪಾಲಿಸುತ್ತಿದ್ದಾರೆ ಅನ್ನಿಸುತ್ತದೆ. ಕೆಟ್ಟದ್ದರಿಂದ ಒಳ್ಳೆಯದನ್ನು ಬಿಡಿಸಿ ಒಳ್ಳೆಯದನ್ನು ನೋಡುವ ‘ತಾರತಮ್ಯ ಜ್ಞಾನ’ ಎನ್ನುವುದು ಇವರ ಈ “ತಾರತಮ್ಯ ಮಾಡಬಾರದು”ವಿನಲ್ಲಿ ಕರಗಿಹೋಗಿ ಬಿಟ್ಟಿರುತ್ತದೆಯೆಂದು ಅನ್ನಿಸುತ್ತಿದೆ.

ಎಲ್ಲ ನ್ಯೂಸ್ ಪೇಪರುಗಳನ್ನು ಗುಡ್ಡೆ ಹಾಕಿಕೊಂಡು ಓದುವವರು(ಲಂಕೇಶ್ – ಹಾಯ್‌ಗಳನ್ನು ಸಮಾನವಾಗಿ ಮೆಚ್ಚುತ್ತಿದ್ದವರುಂಟು), ಸಾರಾಸಗಟಾಗಿ ರಾಜಕೀಯವೇ ಹೊಲಸು ಎನ್ನುವವರು, ಎಲ್ಲ ರಾಜಕಾರಣಿಗಳನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವವರು, ಎಲೆಕ್ಷನ್ ಟೈಮಿನಲ್ಲಿ ಒಳ್ಳೆಯವರ ಮು‌ಖ ಕೆತ್ತುತ್ತ ಕುಳಿತುಕೊಳ್ಳವ ವರದಿಗಾರರು, ಗಾಂಧಿ ಮತ್ತು ಸಾವರ್ಕರ್ ಫಿಲಾಸಫಿಗಳನ್ನು ಅಕ್ಕ ಪಕ್ಕ ಇಟ್ಟು ಸಮಾನ ಗುಣವಾಚಕಗಳಲ್ಲಿ ಚರ್ಚಿಸುವವರು ಇವರೆಲ್ಲ ‘ತಾರತಮ್ಯ ಜ್ಞಾನ’ ಸತ್ತ ಗಂಭೀರ ವ್ಯಾಧಿ ಪೀಡಿತರು. ಇಂತಹವರ ನಿಲುವಿನ ಹಿಂದೆ ಕ್ಷುದ್ರವಾದ ಲೌಕಿಕ ಫಲಾಪೇಕ್ಷೆಗಳು ಇರುತ್ತವೆ. ಕೋಮುವ್ಯಾಧಿ ಪೀಡಿತವಾದ ಈ ಕಾಲ ಘಟ್ಟದಲ್ಲಂತೂ ಇದು ಸರ್ವಾಂತರ್ಯಾಮಿಯಾಗಿರುವುದು ಎದ್ದು ಕಾಣುತ್ತಿದೆ.

ನನ್ನ ಜೀವಮಾನದಲ್ಲಿ ಜ್ವಲಂತ ತಾರತಮ್ಯ ಪ್ರಜ್ಞೆಯಿಂದ ಬರೆದವರು ಆಲೋಚಿಸಿದವರು , ಕ್ರಿಯೆಯಲ್ಲಿ ತಂದವರು ಅಂದರೆ ಲಂಕೇಶ್ ಅವರೊಬ್ಬರೇ ಅಂತ ಕಾಣುತ್ತದೆ. ಮೊದಲನೆಯದಾಗಿ ಜಾಹೀರಾತು ಇಲ್ಲದೆ ತಮ್ಮ ಪತ್ರಿಕೆಯನ್ನು ಎರಡು ದಶಕಗಳ ಕಾಲ ಹೊರ ತಂದಿದ್ದೇ ಅವರ ದಿಟ್ಟ ತಾರತಮ್ಯ ಪ್ರಜ್ಞೆಯ ಮೂಲ ಯಾವುದೆಂಬುದನ್ನು ಕಾಣಿಸುತ್ತದೆ. ಕರ್ನಾಟಕದಲ್ಲಿ ಈ ಅನನ್ಯ ವಿದ್ಯಮಾನವನ್ನು ಯಾರೂ ಗುರುತಿಸಿದಂತಿಲ್ಲ. ಉಳ್ಳವರ, ಪ್ರಬುತ್ವದ ಹಂಗನ್ನು ನಿರಾಕರಿಸಿ ನಡೆದ ಘನ ನಡೆ ಇದು.

ಎರಡನೆಯದಾಗಿ, ಒಂದು ಪತ್ರಿಕೆಗೆ ಬರೆದವರು ಮತ್ತೊಂದರಲ್ಲಿ ಬರೆಯಬಾರದು ಎಂದು ಲಂಕೇಶರು ಹೇಳುತ್ತಿದ್ದರು. ಅದು ಅಭಿರುಚಿ, ಮೌಲ್ಯ ಪ್ರಜ್ಞೆಯ ವಿಚಾರ ಎನ್ನುವುದಕ್ಕಿಂತ ಯಾರ ಜೊತೆ ಯಾವುದರ ಜೊತೆ ಇರಬೇಕೆಂದು ತಿಳಿದು ಮತ್ತು ಇದ್ದು ತೋರುವ ಮೂಲಭೂತ ನ್ಯಾಯವಂತಿಕೆಯ ಘನ ವಿಚಾರವಾಗಿತ್ತು. ಜಾಹಿರಾತು ತೆಗೆದುಕೊಳ್ಳದೆ ತರುತ್ತಿದ್ದ ಲಂಕೇಶ್ ಪತ್ರಿಕೆಗೆ ಒಂದು ಪ್ರಜಾಪ್ರಭುತ್ವದ ಉನ್ನತ ವ್ಯಕ್ತಿತ್ವ ಇತ್ತು. ಅಲ್ಲಿ ಬರೆಯುವುದು ಒಂದು ಉನ್ನತಿಕೆ ಒಳಿತಿನ ಜೊತೆಗಿರುವ ಒಂದು ಘನ‌ ನಿಲುವು ಎಂದು ತಿಳಿಯಬೇಕು ಎನ್ನುವುದು ಲಂಕೇಶ್ ಅವರ ಮಾತಿನ ಇಂಗಿತವಾಗಿತ್ತು.

‌ಒಂದು ಕಾಲದಲ್ಲಿ ಪ್ರಜಾವಾಣಿ ಯಲ್ಲಿ ಬರೆಯುತ್ತಿದ್ದ ಆಹ್ವಾನಿತ ಅಂಕಣಕಾರರು ಮತ್ತು ಬರಹಗಾರರನ್ನು ನೆನಪುಮಾಡಿಕೊಳ್ಳಬಹುದು. ಅಲ್ಲಿ ಕುಲದೀಪ ನಯ್ಯರ್ ಅವರ ಅಂಕಣ ಬರುತ್ತಿತ್ತು. ನಾಗೇಶ್ ಹೆಗಡೆ, ದಿನೇಶ್ ಅಮೀನ್ ಮಟ್ಟು, ರಾಮಚಂದ್ರ ಗುಹಾ ಇಂಥವರ ವರದಿ ಅಂಕಣಗಳ ಜೊತೆಗೆ ಕನ್ನಡದ ಗಂಭೀರ ಲೇಖಕರು ಅಲ್ಲಿ ಬರೆಯುತ್ತಿದ್ದರು, ಕಾಣಿಸಿಕೊಳ್ಳುತ್ತಿದ್ದರು. ಲಂಕೇಶ್ ಅವರೇ ತಮ್ಮ ಪತ್ರಿಕೆ ತರುವ ಪೂರ್ವದಲ್ಲಿ ಅಲ್ಲಿ ಅಂಕಣ ಬರೆಯುತ್ತಿದ್ದರು

ಜಾತಿ, ಬಾಷೆ, ರೈತ, ದಲಿತ, ಮಹಿಳೆ ಕುರಿತ ಚಳವಳಿಗಳ ಮಹಾ ಚರ್ಚೆಗಳಿಗೆ ದನಿಯಾಗಿ ಕರ್ನಾಟಕದ ಜನ ಚಳವಳಿಗಳ ಜೊತೆ ಪ್ರಜಾವಾಣಿ ಹೆಜ್ಜೆ ಹಾಕಿದ ಇತಿಹಾಸ ಇದೆ. ಒಂದು ದಿನದ ಸಂಚಿಕೆಯನ್ನು ದೇವನೂರು ಮಹಾದೇವ ಅವರು ಸಂಪಾದಿಸಿದ ಅಪರೂಪದ ಅನನ್ಯ ಪ್ರಯೋಗ ಅಲ್ಲಿ ನಡೆಯಿತು. ಹೀಗಾಗಿ ಇಲ್ಲಿ ಬರೆದವರು ಮತ್ತೆಲ್ಲಿಯಾದರೂ ಬರೆದರೆ ಅದು ಒಂದು ರೀತಿ ಪಾಪಕ್ರಿಯೆ ಎನ್ನುವಂಥ ಭಾಸ ಹುಟ್ಟಿಸುತ್ತಿತ್ತು. ಪ್ರಜಾವಾಣಿಯ ವ್ಯಕ್ತಿತ್ವದ ಇಂಟಿಗ್ರಿಟಿ ಹಾಗಿತ್ತು. ಆದರೆ ಪ್ರಜಾವಾಣಿಯ ವ್ಯಕ್ತಿತ್ವ ಈಗ ನಶಿಸುತ್ತಿದೆ. ಅದು ಬೇರೆ ವಿಚಾರ.

ಮೂರನೆಯದಾಗಿ ಎಲೆಕ್ಷನ್ನುಗಳು ಹತ್ತಿರ ಬಂದಾಗ ಲಂಕೇಶ್ ಪತ್ರಿಕೆಯಲ್ಲಿ ಸ್ವತಃ ಲಂಕೇಶ್ ಬರೆಯುತ್ತಿದ್ದ ಅಂಕಣಗಳು robust ಆದ ಅಳ್ತನ ಪಡೆಯುತ್ತಿದ್ದವು. ರೋಮಾಂಚನ ಹುಟ್ಟಿಸುವಂತಿರುತ್ತಿದ್ದವು, ಮಾರ್ಗದರ್ಶಿಯಾಗಿರುತ್ತಿದ್ದವು. “ಈ ಉಮೇದುವಾರ ಯಾಕೆ ಗೆಲ್ಲಬೇಕು? ” , “ಈ ಇನ್ನೊಬ್ಬ ಅಥವಾ ಮತ್ತೊಬ್ಬ ಯಾಕೆ ತಿರಸ್ಕಾರಕ್ಕೆ ತಕ್ಕನಾದವನು” ಎಂದು ಚಕಾಚಕ್ ‌ಅಗಿ, ಯಾವನಿಗೂ ಕೇರ್ ಮಾಡದೆ ಬರೆಯುತ್ತಿದ್ದ ಲಂಕೇಶ್ ಅವರ ‘ಮಾರ್ಗ’ ಈಗ ಅನುಸರಣೀಯ ಮೌಲ್ಯವಾಗುವುದಿರಲಿ, ಚರ್ಚೆಯ ವಿಷಯವೂ ಆಗದೆ ಹೋಗಿರುವುದು‌ ನಮ್ಮ‌ ಕಾಲ, ಕೆಟ್ಟು ಕೆರ ಹಿಡಿದಿದೆ ಎನ್ನುವುದನ್ನು ತೋರಿಸುತ್ತದೆ.

ಈಗ ಅನೇಕರು ಬರೆಯುವ ಅತ್ತಲೂ ಇಲ್ಲ ,ಇತ್ತಲೂ ಇಲ್ಲದ, ಒಳ್ಳೇದು ಕೆಟ್ಟದ್ದು ಎರಡರ ಕೆನ್ನೆಗೂ ಬಾರಿಸಿ , ಗೊಂದಲ ಹುಟ್ಟಿಸಿ ಕೊನೆಗೆ ಕೇಡಿಗೆ ನೆರವಾಗುವ “ತಾರತಮ್ಯ ಜ್ಞಾನ” ನಶಿಸಿದ ಬರವಣಿಗೆಯಂತಲ್ಲದೇ, ಒಳ್ಳೆಯದನ್ನು ಗುರುತಿಸಿ ಸಾಮಾನ್ಯ ಮತದಾರನಿಗೆ ಅವರು ನೆರವಾಗುತ್ತಿದ್ದರು. ಅಲ್ಲಿ ಸ್ವಂತದ ಲಾಭಾಪೇಕ್ಷೆಯಿಲ್ಲದ ಪ್ರಜಾಪ್ರಭುತ್ವದ ನೆಲೆಯಿಂದ ಮಾಡಿದ ವಸ್ತುನಿಷ್ಟ ಅಯ್ಕೆಗಳಿರುತ್ತಿದ್ದವು. ಅದ್ದರಿಂದ ತಾರತಮ್ಯ ಮಾಡಬಾರದು ಎನ್ನುವ ಮಾತು, ತಾರತಮ್ಯ ಜ್ಞಾನ ಅಥವಾ ತಾರತಮ್ಯ ಪ್ರಜ್ಞೆ ಎನ್ನುವುದಕ್ಕಿಂತ ಭಿನ್ನವಾದುದಾಗಿದೆ.

ಇವೆರಡರ ನಡುವೆ ಇರುವ ಅಂತರದ ಪರಿಜ್ಞಾನ ಇಲ್ಲದೆ ಹೋದರೆ ನಮ್ಮ ವ್ಯಕ್ತಿತ್ವಕ್ಕೆ ಚಾರಿತ್ರ್ಯಹೀನತೆಯ ಗಂಭೀರವಾದ ಹಾನಿಯಾಗಿದೆ ಅಂತಲೇ ಅರ್ಥ. ಮುರ್ನಾಲ್ಕು ದಶಕ ಕಾಂಗ್ರೆಸ್ ನಲ್ಲಿದ್ದು ಬಿಜೆಪಿಗೆ ಹಾರುವ ರಾಜಕಾರಣಿಗಳಲ್ಲಿ ಈ ದೋಷ ಎದ್ದು ಕಾಣುತ್ತದೆ. ಬಿಜೆಪಿಯ ಸರ್ವನಾಶಕ ಗುಣ ಕಾಣದ ದೇಶದ ಮತದಾರನಲ್ಲಿ ಈ ವ್ಯಾಧಿ ತೀವ್ರವಾಗಿರುವುದು ಗೊತ್ತಾಗುತ್ತದೆ. “ನಾನು ಎಡವೂ ಅಲ್ಲ , ಬಲವೂ ಅಲ್ಲ, ಮಧ್ಯಮ ಮಾರ್ಗಿ ” ಎಂದು ಎಲ್ಲದರಿಂದ ದೂರ ಉಳಿದಿರುವಂತೆ ಕಾಣುವ ಆದರೆ ಆಂತರ್ಯದಲ್ಲಿ ಕೋಮುವ್ಯಾಧಿ ಪೀಡಿತರಾಗಿರುವ ಶಿಕ್ಷಕ ಗಣದಲ್ಲಿ, ವಕೀಲರು, ಜಡ್ಜುಗಳಲ್ಲಿ, ಪ್ರಾದ್ಯಾಪಕ, ವಿಜ್ಞಾನಿ..ಇತ್ಯಾದಿ‌ ಇತ್ಯಾದಿ ‘ಗಣಂಗಳಲ್ಲಿ’, ರೈತ ದಲಿತ ಮಹಿಳಾ ಹಿಂದುಳಿದ ಲೋಕಾಭಿರಾಮ ಸಾಮಾನ್ಯ ಸಾಮಾಜಿಕ ಸಮುದಾಯಗಳಲ್ಲಿ ಈ ವ್ಯಾಧಿ ಪೀಡನೆ ಎದ್ದು ಕಾಣುತ್ತದೆ. ಇದೇ ನಮ್ಮ ಸಮಸ್ತ ಹಾನಿಯ ಮೂಲ ಕಾರಣವಾಗಿದೆ ಅನ್ನಿಸುತ್ತದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು